ತೆಂಕನಿಡಿಯೂರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ; ಪ್ರಮೋದ್ ಮಧ್ವರಾಜ್
ಉಡುಪಿ: ತೆಂಕನಿಡಿಯೂರು ಗ್ರಾಮದ ಅಭಿವೃದ್ಧಿಯಲ್ಲಿ ಪ್ರಾಮಾಣಿಕ ಸೇವೆ ಮಾಡಲು ಸದಾಕಟಿಬದ್ದನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ತೆಂಕನಿಡಿಯೂರು ಗ್ರಾಮದಲ್ಲಿ ಗ್ರಾಮವಿಕಾಸ ಮತ್ತು ಮುಖ್ಯಮಂತ್ರಿ ರಸ್ತೆ ಯೋಜನೆಯಡಿ ವಿವಿಧ ರಸ್ತೆ ಮತ್ತು ಚರಂಡಿ ಕಾಮಗಾರಿ ಉದ್ಘಾಟನೆ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ವಿವಿಧ ಯೋಜನೆಯಡಿ ಕೋಟ್ಯಂತರ ರೂಪಾಯಿ ಅನುದಾನ ತರಿಸಿ ಈಗಾಗಲೇ ತೆಂಕನಿಡಿಯೂರು ಕೆಳಾರ್ಕಳಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಸಹಿತ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದೆ ವಿವಿಧ ಇಲಾಖಾಧಿಕಾರಿಗಳನ್ನು ಜನರ ಬಳಿಗೆ ತರಸಿ ಜನಸಂಪರ್ಕ ಸಭೆ ನಡೆಸಲಾಗುವುದು. ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
ಇದೇ ವೇಳೆ ಮಾತನಾಡಿದ ಜಿಪಂ ಸದಸ್ಯ ಜನಾರ್ದನ ತೋನ್ಸೆ ಅವರು ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ರೂ 1708 ಕೋಟಿ ದಾಖಲೆ ಪ್ರಮಾಣದ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ ಎಂದರು.
ತೆಂಕನಿಡಿಯೂರು ಗ್ರಾಪಂ. ಅಧ್ಯಕ್ಷ ಜಯಕುಮಾರ್ ಬೆಳ್ಕಳೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಧನಂಜಯ ಕುಮಾರ್, ಸದಸ್ಯರಾದ ಆಗ್ನೆಲ್ ಫೆರ್ನಾಂಡಿಸ್, ಸತೀಶ್ ನಾಯ್ಕ್, ವೆಂಕಟೇಶ್ ಕುಲಾಲ್, ಮೀನಾ ಪಿಂಟೊ, ಕೃಷ್ಣ ಶೆಟ್ಟಿ, ಪ್ರಮುಖರಾದ ಪ್ರಖ್ಯಾತ ಶೆಟ್ಟಿ, ಯತೀಶ್ ಕರ್ಕೆರಾ ಹಾಗೂ ಇತರರು ಉಪಸ್ಥಿತರಿದ್ದರು.