ತೆರಿಗೆ ಏರಿಕೆ ಮಾಡಿ ನಷ್ಟ ಭರಿಸುತ್ತಿದೆ: ಎಂ.ಲಕ್ಷ್ಮಣ್
ಮೈಸೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಿಜೆಪಿ ಸರ್ಕಾರ ಚುನಾವಣೆ ದೃಷ್ಟಿಯಿಂದ ಪೆಟ್ರೋಲ್-ಡಿಸೇಲ್ನ ಬೆಲೆ ಕಡಿಮೆ ಮಾಡಿದ್ದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ನಷ್ಟ ಭರಿಸುತ್ತಿದೆ ಎಂದು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸಮರ್ಥಿಸಿಕೊಂಡಿದ್ದಾರೆ.
ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಕೇಂದ್ರದ ಸಚಿವೆ ನಿರ್ಮಲ ಸೀತಾರಾಮನ್ ಅವರು ಪೆಟ್ರೋಲ್-ಡಿಸೇಲ್ ಮೇಲೆ 3 ರೂ. ಕಡಿಮೆ ಮಾಡಿದ್ದರು. ಆಯಾ ರಾಜ್ಯಗಳಲ್ಲಿ ವಿಧಿಸಿರುವ ತೆರಿಗೆ ಕಡಿತಗೊಳಿಸಿದರು. ಆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರವನ್ನು ಮೆಚ್ಚಿಸುವ ಸಲುವಾಗಿ ರಾಜ್ಯದ ತೆರಿಗೆಯಲ್ಲಿ 5 ರೂ.ಕಡಿತಗೊಳಿಸಿದರು. ಇದರಿಂದ 15,184 ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದೆ. ಈ ನಷ್ಟ ಸರಿದೂಗಿಸಲು ರಾಜ್ಯ ಸರ್ಕಾರ ಮೌಲ್ಯಾಧಾರಿತ ತೆರಿಗೆ ಪುನರ್ ಜಾರಿಗೆ ತಂದಿದೆ. ಇದು ರಾಜಕೀಯ ಪ್ರೇರಿತ ಬೆಲೆ ಏರಿಕೆಯಲ್ಲ ಎಂದರು.
ಆರ್.ಅಶೋಕ್ ವಿಪಕ್ಷ ನಾಯಕನ ಜವಾಬ್ದಾರಿ ಅರಿತು ಮಾತನಾಡಬೇಕು. ನಾಲಿಗೆ ಮೂಳೆ ಇಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಬಿಜೆಪಿ ನಾಯಕರಿಗೆ ಕಿಂಚಿತ್ತು ಸಾಮಾನ್ಯಜ್ಞಾನ ಇದ್ದು, ಜನರ ಮೇಲೆ ಕಾಳಜಿ ಇದ್ದರೆ 2014ರಿಂದ 2024ರವರೆಗೆ ಪೆಟ್ರೋಲ್-ಡಿಸೇಲ್ ಮೇಲೆ 22 ಬಾರಿ ಬೆಲೆ ಏರಿಕೆ ಮಾಡಿರುವ ಕುರಿತು ಪ್ರಶ್ನಿಸಲಿ ಎಂದು ಸವಾಲು ಹಾಕಿದರು.
ಕಚ್ಚಾತೈಲ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ 77 ರೂ.ಗೆ ಪೆಟ್ರೋಲ್, 55ರೂ.ಗೆ ಡೀಸೆಲ್ ನೀಡುತ್ತಿತ್ತು. ಆದರೆ, ಇಂದು ಕಚ್ಚಾತೈಲ ಬೆಲೆ ಕುಸಿತವಾಗಿದೆ. ಹೀಗಾಗಿ 60 ರೂ. ಪೆಟ್ರೋಲ್ ನೀಡಬೇಕು. ಆದರೆ, 102 ರೂ.ಗೆ ನೀಡುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ 1 ಲೀಟರ್ ಗೆ 45.14 ರೂ.ಡಿಸೇಲ್ನಲ್ಲಿ 32 ರೂ. ಲಾಭ ಬರುತ್ತಿದೆ. ಇದರಿಂದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ 40 ಲಕ್ಷ ಲಾಭ ಬಂದಿದೆ. ಕೇಂದ್ರ ಸರ್ಕಾರ ವಿಧಿಸಿರುವ ತೆರಿಗೆಯಲ್ಲಿ 20 ರೂ.ಕಡಿಮೆ ಮಾಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಂದ್ರಕ್ಕೆ ಆಗ್ರಹಿಸಲಿ ಎಂದರು.