ತೊಕ್ಕೊಟ್ಟು: ಟ್ಯಾಂಕರ್ ಢಿಕ್ಕಿ; ದ್ವಿಚಕ್ರ ವಾಹನ ಸಹಸವಾರೆ ಸ್ಥಳದಲ್ಲೇ ಮೃತ್ಯು

Spread the love

ತೊಕ್ಕೊಟ್ಟು: ಟ್ಯಾಂಕರ್ ಢಿಕ್ಕಿ; ದ್ವಿಚಕ್ರ ವಾಹನ ಸಹಸವಾರೆ ಸ್ಥಳದಲ್ಲೇ ಮೃತ್ಯು

ಅಸಮರ್ಪಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ವೇಳೆ ಟ್ಯಾಂಕರ್‌ವೊಂದರ ಅಡಿಗೆ ಬಿದ್ದ ಪರಿಣಾಮ, ಹಿಂಬದಿ ಸವಾರರಾಗಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಗಳೂರು ನಗರದ ಸಮೀಪದ ತೊಕ್ಕೊಟ್ಟುವಿನಲ್ಲಿ ಶನಿವಾರ ಸಂಜೆ 5ರ ಸುಮಾರಿಗೆ ನಡೆದಿದೆ.

ಘಟನೆಯು ತೊಕ್ಕೊಟ್ಟು – ಚೆಂಬುಗುಡ್ಡೆ ರಸ್ತೆಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಸುರತ್ಕಲ್ ಸಮೀಪದ ಕೃಷ್ಣಾಪುರದ ಮಹಿಳೆ ರಹಮತ್(47) ಎಂದು ಗುರುತಿಸಲಾಗಿದೆ. ಬೈಕ್ ಸವಾರರಾಗಿದ್ದ ಅವರ ಪತಿ ಅಬ್ದುಲ್ ರಶೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ನಡೆದ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳದಲ್ಲಿ ನೂರಾರು ಸಾರ್ವಜನಿಕರು ಆಕ್ರೋಶಗೊಂಡು ಸೇರಿದ್ದರಿಂದ, ಟ್ರಾಫಿಕ್ ಜಾಮ್ ಉಂಟಾಯಿತು.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸದ್ಯ ಮಹಿಳೆಯ ಮೃತದೇಹವನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಪೊಲೀಸರ ಪ್ರಕ್ರಿಯೆ ಮುಗಿದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

“ಮಂಗಳೂರು ನಗರದಿಂದ ದೇರಳಕಟ್ಟೆಗೆ ತೆರಳುವ ತೊಕ್ಕೊಟ್ಟು – ಚೆಂಬುಗುಡ್ಡೆಯ ರಸ್ತೆಯು ಪ್ರಮುಖ ರಸ್ತೆಯಾಗಿದ್ದು, ಪ್ರಮುಖ ಮೂರು ನಾಲ್ಕು ಆಸ್ಪತ್ರೆ, ಕಾಲೇಜು, ವಿವಿಗಳನ್ನು ಸಂಪರ್ಕಿಸುತ್ತದೆ. ಇಲ್ಲಿನ ರಸ್ತೆಯು ಸಂಪೂರ್ಣ ಹಾಳಾಗಿ, ಸುಮಾರು ವರ್ಷಗಳೇ ಕಳೆದಿದೆ. ಆದರೂ ಕೂಡ, ಉಳ್ಳಾಲದ ಶಾಸಕರಾದ ಸ್ಪೀಕರ್ ಯು ಟಿ ಖಾದರ್ ಅಗಲೀ, ಉಳ್ಳಾಲ ನಗರಸಭೆಯ ಅಧಿಕಾರಿಗಳಾಗಲೀ ಈವರೆಗೆ ಕ್ರಮ ಕೈಗೊಂಡಿಲ್ಲ. ಚೊಂಬುಗುಡ್ಡೆ ರಸ್ತೆ ಸರಿಯಾಗಲು ಇನ್ನೆಷ್ಟು ಜನರ ಪ್ರಾಣ ಹೋಗಬೇಕು” ಎಂದು ಸ್ಥಳೀಯಗಳು ಆಕ್ರೋಶ ಹೊರಹಾಕಿದ್ದಾರೆ.

“ಇಂದಿನ ಘಟನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು. ಕೂಡಲೇ ಚೊಂಬುಗುಡ್ಡೆ ರಸ್ತೆಯನ್ನು ಸರಿಪಡಿಸಲು ಶಾಸಕ ಯು ಟಿ ಖಾದರ್ ಮುತುವರ್ಜಿ ವಹಿಸಬೇಕು” ಎಂದು ಸ್ಥಳೀಯ ತರಕಾರಿ ವ್ಯಾಪಾರಿಯೋರ್ವರು ಒತ್ತಾಯಿಸಿದ್ದಾರೆ.


Spread the love