ತ್ಯಾಜ್ಯ ಸಂಗ್ರಹ ಗುತ್ತಿಗೆದಾರರು ಮುಷ್ಕರಕ್ಕೆ ಇಳಿಯದಂತೆ ಶಾಸಕ ವೇದವ್ಯಾಸ ಕಾಮತ್ ಖಡಕ್ ಸೂಚನೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ಸಂಗ್ರಹದ ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಮುಷ್ಕರ ಹೂಡಬಾರದು, ಯಾವ ಸಮಸ್ಯೆ ಇದ್ದರೂ ಮೊದಲು ತಮ್ಮ ಗಮನಕ್ಕೆ ತರಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಗುತ್ತಿಗೆದಾರರು ಮತ್ತು ಸಿಬ್ಬಂದಿಗಳು ಏಕಾಏಕಿ ಮುಷ್ಕರ ಹೂಡುವುದರಿಂದ ಮಂಗಳೂರಿನ ಜನರಿಗೆ ತುಂಬಾ ತೊಂದರೆಯಾಗುತ್ತದೆ. ಗುತ್ತಿಗೆದಾರರ ಮತ್ತು ಪಾಲಿಕೆಯ ನಡುವೆ ಸಂವಹನ ಕೊರತೆಯಿಂದ ಗುತ್ತಿಗೆದಾರರ ಸಿಬ್ಬಂದಿಗಳು ಕೆಲಸದ ನಿಲ್ಲಿಸಿದರೆ ಅದು ಮಂಗಳೂರು ನಗರದ ಜನಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಪಾಲಿಕೆ ಆಯುಕ್ತರು, ಆರೋಗ್ಯಾಧಿಕಾರಿಗಳೊಂದಿಗೆ ಮತ್ತು ಗುತ್ತಿಗೆದಾರರೊಂದಿಗೆ ಚರ್ಚಿಸಿ ಗುತ್ತಿಗೆದಾರರಿಗೆ ಬಾಕಿ ಇರುವ ಎರಡು ಕೋಟಿ ರೂಪಾಯಿ ಪಾವತಿಸಲು ಸೂಚನೆ ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು.
ತಕ್ಷಣ ಗುತ್ತಿಗೆದಾರರು ಕೆಲಸ ಆರಂಭಿಸಿ ರಸ್ತೆಬದಿಗಳಲ್ಲಿ ಬಿದ್ದಿರುವ ತ್ಯಾಜ್ಯ ಸಂಗ್ರಹಣೆ ಮಾಡಬೇಕು ಎಂದು ಹೇಳಿ ಬಿಲ್ ಪಾವತಿಸಲಾಗಿದೆ. ಇದರ ನಂತರ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಸಿಬ್ಬಂದಿಗಳು ಕೆಲಸ ಆರಂಭಿಸಿದ್ದಾರೆ. ಭವಿಷ್ಯದಲ್ಲಿ ಹೀಗೆ ದಿಢೀರನೆ ಪ್ರತಿಭಟನೆ ಮಾಡಲು ಇಳಿಯಬಾರದು ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.