ದ.ಕ ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ ಮರಳುಗಾರಿಕೆಗೆ ರಾಜ್ಯ ಸರ್ಕಾರದಿಂದ ಅನುಮತಿ – ಶಾಸಕ ಕಾಮತ್
ಮಂಗಳೂರು: ಹಲವು ಸಮಯಗಳಿಂದ ದ.ಕ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದು ಮರಳು ದಿಬ್ಬಗಳನ್ನು ತೆರವುಗೊಳಿಸುವ ಕಾರ್ಯ ಪುನರ್ ಆರಂಭಿಸುವಂತೆ ಹಾಗೂ ಮಳೆಗಾಲದಲ್ಲಿ ಜೂನ್ ನಿಂದ ಸಪ್ಟೆಂಬರ್ ತಿಂಗಳ ವರೆಗಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಇವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಆಗಸ್ಟ್ 1 ರಿಂದ ಮರಳುಗಾರಿಕೆ ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿದ್ದು, ಅದರಂತೆ ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಶಾಸಕರ ಮನವಿಯನ್ನು ಪುರಸ್ಕರಿಸಿ ದ.ಕ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮೀನುಗಾರಿಕೆ ನಿಷೇಧ ಇರುವುದರಿಂದ ಆ ಸಮಯದವರೆಗೆ ಮಾತ್ರ ಮರಳುಗಾರಿಕೆ ನಿಷೇಧಿಸಿ ಆಗಸ್ಟ್ ತಿಂಗಳಿನಿಂದ ಮರಳುಗಾರಿಕೆ ಆರಂಭಿಸಲು ಸಿ ಆರ್ ಜಡ್ ಕ್ಲಿಯರೆನ್ಸ್ ನೀಡಲಾದ ಸರಕಾರದ ಪತ್ರದಲ್ಲಿ ವಿಧಿಸಿರುವ ಹೆಚ್ಚುವರಿ ಶರತ್ತನ್ನು ಮಾರ್ಪಾಡುಗೊಳಿಸಿ ಮೀನುಗಾರಿಕಾ ನಿಷೇಧದ ಅವಧಿಯಾದ ಜೂನ್ ತಿಂಗಳ ಪ್ರಾರಂಭದಿಂದ ಜುಲೈ 31 ರ ವರೆಗೆ ಮಾತ್ರ ಮರಳುಗಾರಿಕೆ ಯನ್ನು ನಿಷೇಧಿಸಿ ಆಗಸ್ಟ್ ನಿಂದ ಮರಳುಗಾರಿಕೆ ಯನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದೆ.
ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಮೀನುಗಾರಿಕೆ ಇಲಾಖೆಯು ಮಾರ್ಚ್ ತಿಂಗಳಿನಲ್ಲಿ ಹೊರಡಿಸಿರುವ ಆದೇಶದಲ್ಲಿ ಪಶ್ಚಿಮ ಕರಾವಳಿಯಲ್ಲಿ ಜೂನ್ ಒಂದರಿಂದ ಜುಲೈ 31 ವರೆಗೆ 61 ದಿನಗಳ ಮೀನುಗಾರಿಕೆಯನ್ನು ನಿಷೇದ ಮಾಡಿರುವುದಾಗಿಯೂ ಹೇಳಿದ್ದು ಸಿ.ಆರ್ ಝಡ್ ವಲಯ ವ್ಯಾಪ್ತಿಯಲ್ಲಿ ಬರುವ ನದಿಗಳಲ್ಲಿನ ಮರಳು ದಿಬ್ಬಗಳನ್ನು ತೆಗೆಯುವ ಪ್ರಸ್ತಾವನೆಗಳಿಗೆ ಜೂನ್ ತಿಂಗಳಿನಿಂದ ಸಪ್ಟೆಂಬರ್ ತಿಂಗಳವರೆಗೆ ನಿಷೇದಿಸಿರುವುದನ್ನು ಪುನರ್ ಪರಿಶೀಲಿಸಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಾತ್ರವೇ ನಿಷೇಧಿಸಿ ಷರತ್ತನ್ನು ಮಾರ್ಪಾಡುಗೊಳಿಸುವಂತೆ ಮಾನ್ಯ ಶಾಸಕರು ಪತ್ರದಲ್ಲಿ ಕೋರಿದ್ದರು.
ಹಾಗಾಗಿ ದ.ಕ ಜಿಲ್ಲೆಯ ಜಿಲ್ಲಾಧಿಕಾರಿಗಳು ತಕ್ಷಣವೇ ಸಭೆ ಕರೆದು ಮರಳುಗಾರಿಕೆಗೆ ಪರವಾನಿಗೆಯನ್ನು ಪಡೆದಿರುವವರಿಗೆ ತಕ್ಷಣ ಪರವಾನಿಗೆ ನೀಡಿ ತುರ್ತಾಗಿ ಮರಳಿನ ದಿಬ್ಬ ತೆರವು ಕಾರ್ಯ ಆರಂಭಿಸುವಂತೆ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಇವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.