ದಕ ಜಿಲ್ಲೆಯಲ್ಲಿ ಗುರುವಾರದಿಂದ ಒಂದು ವಾರ ಲಾಕ್ ಡೌನ್

Spread the love

ದಕ ಜಿಲ್ಲೆಯಲ್ಲಿ ಗುರುವಾರದಿಂದ ಒಂದು ವಾರ ಲಾಕ್ ಡೌನ್

 

ಮಂಗಳೂರು: ದಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಒಂದು ವಾರದ ಕಾಲ ಜಿಲ್ಲೆಯನ್ನು ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೊರೋನ ನಿಯಂತ್ರಣ ಕುರಿತು ಮುಖ್ಯಮಂತ್ರಿ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಅವರಿಂದ ಅನೇಕ ಮಾರ್ಗಸೂಚಿಗಳನ್ನು ಆಲಿಸಲಾಗಿದೆ. ಸಂಸದ ನಳಿನ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಜತೆಯಲ್ಲಿ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಲಾಕ್‌ಡೌನ್ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ಗಣ್ಯರಲ್ಲಿ ಚರ್ಚಿಸಿದಾಗ ಒಂದಷ್ಟು ದಿನಗಳಾದರೂ ಏರಿಕೆಯಾಗುತ್ತಿರುವ ಕೊರೋನ ಸೋಂಕಿನ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆ ಕಾರಣ ಗುರುವಾರದಿಂದ ಒಂದು ವಾರ ಕಾಲ ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಇಂದಿನಿಂದ ಬುಧವಾರದವರೆಗೆ ಎಲ್ಲಾ ವಾಣಿಜ್ಯ ವ್ಯವಹಾರಗಳು ತೆರೆದಿದ್ದು, ಸಾರ್ವಜನಿಕರು ಅಗತ್ಯ ಸಾಮಗ್ರಿಗಳು ಹಾಗೂ ಮೂಲಭೂತ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಬುಧವಾರ ರಾತ್ರಿಯಿಂದ ಒಂದು ವಾರ ನಡೆಯಲಿರುವ ಲಾಕ್‌ಡೌನ್ ಬಗ್ಗೆ ಜಿಲ್ಲಾಧಿಕಾರಿ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪ್ರಕಟಿಸಲಿದ್ದಾರೆ. ಸಾರ್ವಜನಿಕರು ಕೊರೋನ ನಿಯಂತ್ರಣ ದೃಷ್ಟಿಯಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಅಗತ್ಯವಿರುವುದರಿಂದ ಲಾಕ್‌ಡೌನ್ ಘೋಷಿಸಲಾಗುತ್ತಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಕೋಟ ಶ್ರಿೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.


Spread the love