ದಕ ಹಾಲು ಉತ್ಪಾದಕರ ಒಕ್ಕೂಟದಿಂದ ಹಾಲು ಮೊಸರಿನ ಪ್ಲಾಸ್ಟಿಕ್, ಸಿಪಿಸಿ ಬಾಟಲ್ ಮರುಸಂಗ್ರಹ
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಪೊರೈಕೆ ಮಾಡುವ ಹಾಲು ಮೊಸರಿನ ಪ್ಲಾಸ್ಟಿಕ್, ಸಿಪಿಸಿ ಬಾಟಲ್ ಗಳನ್ನು ಮರುಸಂಗ್ರಹಿಸಲು ನಿರ್ಧಾರ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಈ ಕುರಿತು ಕುಲಶೇಖರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಹಾಲಿನ ಪ್ಲಾಸ್ಟಿಕ್ ಬಳಕೆಯಾದ ಬಳಿಕ ಅದನ್ನು ಎಸೆಯುವ ಬದಲು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮರುಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕೃತ ನೋಡೆಲ್ ಏಜೆನ್ಸಿಯೊಂದನ್ನು ಗೊತ್ತುಪಡಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚಾ ಹೀ ಸೇವಾ 2019 ಯೋಜನೆಗೆ ಪೂರಕವಾಗಿ ಅಕ್ಟೋಬರ್ 2 ರಿಂದ ಹಾಲಿನ ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನು ಮರು ಸಂಗ್ರಹಿಸಲಾಗುವುದು. ಗ್ರಾಹಕರಿಂದ, ಡೀಲರ್ ಗಳಿಂದ ನಾವು ಏಜೆನ್ಸಿ ಮೂಲಕ ಸಂಗ್ರಹಿಸಿ ಮರು ಸಂಸ್ಕರಣೆ ಮಾಡಲಾಗುವುದು ಎಂದರು.
ಗ್ರಾಹಕರು ಏಜೆನ್ಸಿಯವರಿಗೆ ನೀಡುವಾಗ ಹಾಲಿನ ಪ್ಯಾಕೆಟ್ ಗಳನ್ನು ಚೆನ್ನಾಗಿ ತೊಳೆದುಕೊಡುವ ಮೂಲಕ ಕೆ ಎಂ ಎಫ್ ಜೊತೆ ಕೈಜೋಡಿಸುವಂತೆ ವಿನಂತಿ ಮಾಡಿದರು.