ದತ್ತ ಜಯಂತಿ, ಈದ್ ಮಿಲಾದ್ : ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಅಣ್ಣಾಮಲೈ

Spread the love

ದತ್ತ ಜಯಂತಿ, ಈದ್ ಮಿಲಾದ್ : ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಅಣ್ಣಾಮಲೈ

ಚಿಕ್ಕಮಗಳೂರು:ಸಂಘ ಪರಿವಾರ ಆಯೋಜಿಸಿರುವ ದತ್ತ ಜಯಂತಿಯ ಶೋಭಾಯಾತ್ರೆ ಮತ್ತು ಈದ್‌ ಮಿಲಾದ್‌ ಒಂದೇ ದಿನ ಬಂದಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಬಿಗುವಿನ ಕ್ರಮಗಳನ್ನು ಕೈಗೊಂಡಿದೆ. ಭದ್ರತೆಗಾಗಿ ಸುಮಾರು 4 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ನ.30ರ ಮಧ್ಯರಾತ್ರಿಯಿಂದ ಡಿ.3ರ ಮಧ್ಯರಾತ್ರಿವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಮತ್ತಿತರ ಹಿಂದೂಪರ ಸಂಘಟನೆಗಳು ದತ್ತಜಯಂತಿ ಹಿನ್ನೆಲೆಯಲ್ಲಿ ಡಿ.1ರಂದು ಅನುಸೂಯ ಜಯಂತಿ, 2 ರಂದು ಶೋಭಾಯಾತ್ರೆ, ಧಾರ್ಮಿಕ ಸಭೆ ಹಾಗೂ 3ರಂದು ಇನಾಂ ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ, ಹೋಮ ಹವನ, ಧಾರ್ಮಿಕ ಸಭೆ ಆಯೋಜಿ ಸಿವೆ. ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈದ್‌ ಮೆರವಣಿಗೆ ಮತ್ತು ಶೋಭಾಯಾತ್ರೆಗೆ ಪ್ರತ್ಯೇಕ ಸಮಯ ಮತ್ತು ಮಾರ್ಗಗಳನ್ನು ನಿಗದಿಸಿದೆ.

ಡಿ.2ರಂದು ಮುಸ್ಲಿಂ ಸಮುದಾಯದವರಿಗೆ ನಗರದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಈದ್‌ ಮಿಲಾದ್‌ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿದೆ. ಅಂಜುಮಾನ್‌ ಇಸ್ಲಾಮಿಯಾದವರು ನಗರದಲ್ಲಿ, ಶಿಯಾದವರು ಉಪ್ಪಳ್ಳಿಯಲ್ಲಿ ಪ್ರತ್ಯೇಕ ಮೆರವಣಿಗೆ ನಡೆಸಲಿದ್ದು, ಧಾರ್ಮಿಕ ಸಭೆ ಇರುವುದಿಲ್ಲ. ಕಡೂರಿನಲ್ಲಿ ಡಿ.2ರ ಬದಲಿಗೆ ಡಿ.8 ರಂದು ಈದ್‌ ಮೆರವಣಿಗೆ ನಡೆಸಲು ಮುಸ್ಲಿಂ ಸಮುದಾಯದವರು ನಿರ್ಧರಿಸಿದ್ದಾರೆ.

ಮಧ್ಯಾಹ್ನ 3ಕ್ಕೆ ಕಾಮಧೇನು ಗಣಪತಿ ದೇವಾಲಯದಿಂದ ಹೊರಡುವ ಶೋಭಾಯಾತ್ರೆ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ಸರ್ಕಲ್‌, ಎಂ.ಜಿ. ರಸ್ತೆ ಮೂಲಕ ಸಂಜೆ ಆಜಾದ್‌ ಪಾರ್ಕ್‌ನಲ್ಲಿ ಸೇರಿ ಧಾರ್ಮಿಕ ಸಭೆಯೊಂದಿಗೆ ಮುಕ್ತಾಯವಾಗಲಿದೆ. ಹನುಮಂತಪ್ಪ ಸರ್ಕಲ್‌ ಮತ್ತು ಎಂ.ಜಿ.ರಸ್ತೆಯಲ್ಲಿ ಯಾವುದೇ ಸಂಘಟನೆಗಳಿಗೆ ಬ್ಯಾನರ್‌, ಬಂಟಿಂಗ್ಸ್‌ ಕಟ್ಟಲು ಅವಕಾಶವಿಲ್ಲ. ಮುಸ್ಲಿಂ ಸಮುದಾಯದವರು ಮಾರ್ಕೆಟ್‌ ರಸ್ತೆಯಲ್ಲಿ, ಸಂಘ ಪರಿವಾರದವ ರು ಕಾಮಧೇನು ಗಣಪತಿ ದೇವಸ್ಥಾನ ಬಳಿ, ಬಸವನಹಳ್ಳಿ ಮುಖ್ಯರಸ್ತೆ, ಆಜಾದ್‌ಪಾರ್ಕ್‌ ಬಳಿ ಬ್ಯಾನರ್‌, ಬಂಟಿಂಗ್ಸ್‌ ಕಟ್ಟಲು ಅವಕಾಶ ನೀಡಲಾಗಿದೆ.

ಒಬ್ಬರು ಎಸ್ಪಿ, ಮೂರು ಮಂದಿ ಎಎಸ್ಪಿ, 10 ಡಿವೈಎಸ್ಪಿಗಳು, 30 ಸರ್ಕಲ್‌ ಇನ್ಸ್‌ಪೆಕ್ಟರ್‌ಗಳು, ಇನ್ಸ್‌ಪೆಕ್ಟರ್‌ಗಳು, 134 ಪಿಎಸೈಗಳು, 227 ಎಎಸೈಗಳು, ಎರಡು ಸಾವಿರ ಪೊಲೀಸರು, 20 ಡಿಎಆರ್‌ ತುಕಡಿ, 16 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಸುಮಾರು ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಶಾಂತಿ ಸಭೆ ನಡೆಸಲಾಗಿದೆ. ಶೋಭಾಯಾತ್ರೆ ಹಿನ್ನೆಲೆಯಲ್ಲಿ ಈದ್‌ ಮಿಲಾದ್‌ ಮೆರವಣಿಗೆಯನ್ನು ಬೆಳಗ್ಗೆಯೇ ನಡೆಸುವಂತೆ ಮನವೊಲಿಸಲಾಗಿದೆ. ಕಾನೂನು ಸುವ್ಯವಸ್ಥೆ ನಿರ್ವಹಿಸಲು ಅನುಕೂಲವಾಗುವಂತೆ ಚೆಕ್‌ ಪೋಸ್ಟ್‌ಗಳಲ್ಲಿ 48 ಕಾರ‍್ಯಕಾರಿ ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ದತ್ತಜಯಂತಿ ಹಿನ್ನೆಲೆಯಲ್ಲಿ ನ.30ರ ಮಧ್ಯರಾತ್ರಿಯಿಂದ ಡಿಸೆಂಬರ್‌ 3ರ ಮಧ್ಯರಾತ್ರಿವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲೆಯ ಗಡಿ ಬೇಲೂರು, ಭದ್ರಾವತಿ ಮತ್ತಿತರ ತಾಲೂಕುಗಳಲ್ಲೂ ಮದ್ಯ ಮಾರಾಟ ನಿಷೇಧಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಪೊಲೀಸ್‌ ಆ್ಯಕ್ಟ್ನ ಕಲಂ 35 ಮತ್ತು 39ರಡಿ ಆಯೋಜಕರು ಶಾಂತಿ ಕಾಪಾಡುವ ಬಗ್ಗೆ ನಿರ್ದಿಷ್ಟ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಡಿ.2ರಂದು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಬಸವನಹಳ್ಳಿ ಮುಖ್ಯರಸ್ತೆ, ಎಂ.ಜಿ.ರಸ್ತೆ, ಆಜಾದ್‌ಪಾರ್ಕ್‌, ಮಾರ್ಕೆಟ್‌ ರಸ್ತೆ, ಕೆ.ಎಂ.ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

ಸಿಸಿ ಟಿವಿ ಕಣ್ಗಾವಲು:ಅಂತರ ಜಿಲ್ಲಾ ಸರಹದ್ದುಗಳಲ್ಲಿ 14, ನಗರ ವ್ಯಾಪ್ತಿಯಲ್ಲಿ 5 ಚೆಕ್‌ಪೋಸ್ಟ್‌ ತೆರೆಯಲಾಗಿದೆ. ನಗರದಿಂದ ಇನಾಂ ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ 5 ಚೆಕ್‌ ಪೋಸ್ಟ್‌ಗಳಿದ್ದು, ನ.30ರ ಬೆಳಗ್ಗೆಯಿಂದ ಡಿ.4ರ ಬೆಳಗ್ಗೆವರೆಗೆ ಇವು ಕಾರ‍್ಯ ನಿರ್ವಹಿಸಲಿವೆ. ಇನಾಂ ದತ್ತಪೀಠದಲ್ಲಿ ಒಟ್ಟು 21 ಸ್ಥಳದಲ್ಲಿ ಸಿಸಿ ಟಿವಿ ಕ್ಯಾ ಮೆರಾ ಅಳವಡಿಸಿದ್ದು, ನಗರದಲ್ಲಿ 10 ಕಡೆ, ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ ಕೂಡ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಐ.ಡಿ.ಪೀಠಕ್ಕೆ ತೆರಳುವ ರಸ್ತೆ ಕಿರಿ ದಾಗಿರುವುದರಿಂದ ದತ್ತಭಕ್ತರಿಗೆ ಮಿನಿ ಬಸ್‌ಗಳಲ್ಲಿ ಬರುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಉದ್ದನೆಯ ಬಸ್‌ಗಳಲ್ಲಿ ಬಂದರೆ ಕೈಮರ ಬಳಿ ಆ ಬಸ್‌ಗಳ ನ್ನು ನಿಲ್ಲಿಸಿ ಪೀಠಕ್ಕೆ ತೆರಳಲು ಜಿಲ್ಲಾಡಳಿತ 50 ಮಿನಿ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ನಿಗದಿತ ಶುಲ್ಕ ಪಾವತಿಸಿ ದತ್ತ ಭಕ್ತರು ಈ ಬಸ್‌ಗಳಲ್ಲಿ ತೆರಳಬೇಕಿದೆ.

ಕಳೆದ ವರ್ಷ ದತ್ತಜಯಂತಿ ಸಂದರ್ಭ ಶಾಂತಿಭಂಗ ಮಾಡಿದ ದಕ್ಷಿಣಕನ್ನಡದ 28 ಮಂದಿಯಿಂದ ಆಯಾ ತಹಸೀಲ್ದಾರ್‌ ಮೂಲಕ 5 ಲಕ್ಷಕ್ಕೆ ಬಾಂಡ್‌ ಪಡೆದುಕೊಳ್ಳಲಾಗಿದೆ. ಹೊರ ಜಿಲ್ಲೆಯ 67 ಮಂದಿಯಿಂದ ಬಾಂಡ್‌ ಬರೆಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲೂ ಈಗಾಗಲೇ ಪಟ್ಟಿ ಮಾಡಿದ ಶೇ.70 ಮಂದಿಯಿಂದ ಬಾಂಡ್‌ ಬರೆಸಿಕೊಳ್ಳಲಾಗಿದೆ. ಉಳಿದವರಿಂದಲೂ ಇನ್ನೆರಡು ದಿನದಲ್ಲಿ ಬಾಂಡ್‌ ಬರೆಸಿಕೊಳ್ಳಲಾಗುತ್ತದೆ. ಭದ್ರತಾ ಕಾಯಿದೆ ಕಲಂ 107ರಡಿ 982 ಪ್ರಕರಣಗಳಲ್ಲಿ 1408 ಮಂದಿ, ಕಲಂ 108ರಡಿ 4 ಪ್ರಕರಣಗಳಲ್ಲಿ 4 ಮಂದಿ ಹಾಗೂ ಕಲಂ 110ರಡಿ 3 ಪ್ರಕರಣಗಳಲ್ಲಿ 3 ಮಂದಿ ವಿರುದ್ಧ ಪ್ರಕರಣ ದಾಖಲಿಸಿ 1 ಲಕ್ಷ, 5 ಲಕ್ಷ ಹಾಗೂ 10ಲಕ್ಷ ರೂ.ಗಳ ಬಾಂಡ್‌ ಪಡೆದುಕೊಳ್ಳಲಾಗಿದೆ.

 ‘ಇನಾಂ ದತ್ತಪೀಠದಲ್ಲಿ ಸುಪ್ರೀಂ ಕೋರ್ಟ್‌ ಆದೇಶದಂತೆ ಯಥಾಸ್ಥಿತಿ ಕಾಪಾಡಲಾಗುವುದು. ಭಕ್ತರಿಗೆ ದತ್ತಪಾದುಕೆ ದರ್ಶನಕ್ಕೆ ಬೆಳಗ್ಗೆ 7ರಿಂದ ರಾತ್ರಿವರೆ ಗೆ ಅವಕಾಶ ನೀಡಲಾಗುವುದು. ಆಯೋಜಕರು ಮಠಾಧೀಶರ ಪಟ್ಟಿ ನೀಡಿದರೆ ಅವರಿಗೆ ದತ್ತಪಾದುಕೆ ಇರುವ ಗುಹೆಯೊಳಗೆ ಪ್ರವೇಶ ಕಲ್ಪಿಸಲಾಗುವುದು. ಭಕ್ತರಿಗೆ ಪ್ರಸಾದ ಕೊಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ. ರಸ್ತೆ ದುರಸ್ತಿ ಮಾಡಿದ್ದು, ಮೂಲಸೌಲಭ್ಯ ಕಲ್ಪಿಸಲಾಗಿದೆ. ಪೀಠದ ಬಳಿ ಎರಡು, ಹೊನ್ನಮ್ಮನಹಳ್ಳದ ಬಳಿ ಒಂದು ಹೋಟೆಲ್‌ ತೆರೆಯಲು ಅವಕಾಶ ನೀಡಲಾಗಿದೆ. ನಿರ್ಬಂಧಿತ ಪ್ರದೇಶದ ಹೊರಭಾಗದಲ್ಲಿ ಹೋಮ ಹವನ, ಧಾರ್ಮಿಕ ಸಭೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದ್ದಾರೆ.

‘ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು. ಮುಖ್ಯಮಂತ್ರಿ ಪ್ರವಾಸ, ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ಈ ಬಾರಿ ದತ್ತ ರಥಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ. ಪ್ರತಿಯೊಬ್ಬರೂ ಶಾಂತಿ, ಸುವ್ಯವಸ್ಥೆಗೆ ಭಂಗ ಬಾರದಂತೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮನವಿ ಮಾಡಿದ್ದಾರೆ.

ಕೃಪೆ; ವಿಜಯಕರ್ನಾಟಕ


Spread the love