ದಲಿತ ಕೇರಿಗಳಲ್ಲಿ ಮತಯಾಚನೆ ಮಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ವಿವಿಧ ಕಡೆಗಳಲ್ಲಿ ಮತ ಪ್ರಚಾರ ನಡೆಸಿದರು.
ಬಳಿಕ ಎಸ್ಸಿ ಕಾಲೋನಿಗೆ ಆಗಮಿಸಿದ ಭರತ್ ಶೆಟ್ಟಿ, ಸುಮಾರು ೨೦ ಕಾಲೋನಿಗಳಿಗೆ ಭೇಟಿ ನೀಡಿದರು. ಮೊದಲು ಪಡುಕೊಂಬೆಲ್ ಲಚ್ಚಿಲ್ನ ಬಬ್ಬುಸ್ವಾಮಿ ದೈವಸ್ಥಾನ ಕ್ಕೆ ತೆರಳಿ ದೇವರ ದರ್ಶನ ಮಾಡಿದ್ರು. ಪೆರಾರಿ ಕೋಡ್ದಬ್ಬು ದೈವಸ್ಥಾನ, ಗುರುಪುರ ಎಸ್ಸಿ ಕಾಲೋನಿ, ಸೌಹಾರ್ದ ನಗರ ಎಸ್ಸಿ ಕಾಲೋನಿ , ಕಂದಾವರ, ಪದವು, ಮುರನಗರ, ಅದ್ಯಾಪಾಡಿ, ಬಜ್ಪೆ, ನಂತರ ಪಿಲಿಕುಳ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದರು. ಎಸ್ಸಿ ಯುವಮೋರ್ಚಾ ವತಿಯಿಂದ ಅಂಬೇಡ್ಕರ್ ನಗರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಡಾ. ಭರತ್ ಶೆಟ್ಟಿ ವೈ, ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೇ ಕಾಂಗ್ರೆಸ್ ದ್ರೋಹ ಮಾಡಿದೆ. ಇಂತಹ ಪಕ್ಷದಿಂದ ಯಾವುದೇ ನಿರೀಕ್ಷೆ ಮಾಡುವುದು ತಪ್ಪು. ಬರೀ ಮೋಸ, ವಂಚನೆ. ಕೋಮುದ್ವೇಷ ಹುಟ್ಟು ಹಾಕುವುದು, ತಮ್ಮ ಲಾಭಕ್ಕೆ ಇತರರನ್ನು ಬಲಿ ಕೊಡುವುದು, ಹಿಂಸಾಚಾರ ಇವೇ ಈ ಪಕ್ಷದ ಹೆಗ್ಗಳಿಕೆ. ಇಂತಹವುಗಳ ಸಹಾಯದಿಂದಲೇ ಕಾಂಗ್ರೆಸ್ ಇಷ್ಟು ವರ್ಷ ದೇಶವನ್ನ ಕೊಳ್ಳೆ ಹೊಡೆದಿದೆ. ಹಿಂದುಳಿದ ವರ್ಗದವರಿಗೆ ಸಹಾಯದ ಹೆಸರಲ್ಲಿ ಮಾಡುತ್ತಿರುವುದು ಕೇವಲ ಮೋಸ. ಆದರೆ ಜನರಿಗೆ ಇದರ ಅರಿವಿಲ್ಲ. ಈಗಲಾದರೂ ಭವ್ಯ ಭಾರತದ ಹಾಗೂ ಕರ್ನಾಟಕದ ಜನತೆ ಎಚ್ಚೆತ್ತುಕೊಳ್ಳಬೇಕು.. ಬಿಜೆಪಿಯನ್ನ ಗೆಲ್ಲಿಸಬೇಕು.ಈ ಕ್ಷೇತ್ರದಲ್ಲಿ ಕೂಡ ಕಮಲ ಅರಳುವಂತೆ ಮಾಡಬೇಕು. ಈ ಮೂಲಕ ಕ್ಷೇತ್ರದಲ್ಲಿ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯವನ್ನ ತಡಿಯಬೇಕು ಎಂದರು.
ಈ ದೇಶಕ್ಕೆ ಅಂಬೇಡ್ಕರ್ ಕೊಡುಗೆ ಬಹಳ ದೊಡ್ಡದು. ಅಂಬೇಡ್ಕರ್ರಂತಹ ಪ್ರತಿಭೆಗಳು ನಮ್ಮ ದೇಶಕ್ಕೆ ಇನ್ನೂ ಬೇಕು. ಅಂಬೇಡ್ಕರ್ರ ಕೊಡುಗೆಯನ್ನ ಎಂದಿಗೂ ಮರೆಯಲಾಗದು. ಆದರೆ ಅಂಬೇಡ್ಕರ್ಗೆ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ. ಅದನ್ನ ಎಂದಿಗೂ ಕ್ಷಮಿಸಲಾಗದು. ಇಂತಹ ದ್ರೋಹಿ ಕಾಂಗ್ರೆಸ್ಗೆ ಸರಿಯಾದ ಪಾಠ ಕಲಿಸಬೇಕು. ಬಿಜೆಪಿ ಸರ್ಕಾರದ ಸಾಧನೆಗಳನ್ನೊಮ್ಮೆ ನೋಡಿ. ದೇಶವನ್ನ ಉತ್ತುಂಗಕ್ಕೇರಿಸುವ ಯೋಜನೆಗಳನ್ನ ಜಾರಿಗೊಳಿಸಿದ್ದಾರೆ, ಗೊಳಿಸುತ್ತಲೇ ಇದ್ದಾರೆ. ಆ ಎಲ್ಲಾ ಯೋಜನೆಗಳನ್ನ ಈ ಕ್ಷೇತ್ರದ ಜನರಿಗೆ , ಮನೆ ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಇದಕ್ಕೆ ನಿಮ್ಮ ಒಂದೊಂದು ಮತವೇ ನಮಗೆ ಬೆಂಬಲ ಎಂದರು.
ಅಂಬೇಡ್ಕರ್ ಪ್ರಧಾನಮಂತ್ರಿಯಾಗುವುದನ್ನ ತಪ್ಪಿಸಿದ್ದೇ ಕಾಂಗ್ರೆಸ್. ಕಾಂಗ್ರೆಸ್ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಒಬ್ಬ ಯೋಗ್ಯ ವ್ಯಕ್ತಿ ಪ್ರಧಾನಿ ಹುದ್ದೆ ಅಲಂಕರಿಸುವುದು ತಪ್ಪಿ ಹೋಯ್ತು. ಕಾಂಗ್ರೆಸ್ ಕೇವಲ ಒಂದು ಮನೆತನವನ್ನ ಬೆಳೆಸುವುದರಲ್ಲೇ ತಲ್ಲೀನವಾಗಿದೆ. ಅದಕ್ಕೆ ದೇಶದ ಜನರ ಅದರಲ್ಲೂ ಕೆಳವರ್ಗದವರ ಬಗ್ಗೆ ಕಾಳಜಿ ಇಲ್ಲ. ತಾರತಮ್ಯ , ಒಡೆದು ಆಳುವ ನೀತಿ ಅವರ ಅಸ್ತ್ರ. ಅದರ ಮೂಲಕ ನಮ್ಮನ್ನ ದೂರ ಮಾಡಿ ಅವರು ತಮ್ಮ ಬೇಳೆ ಬೇಯಿಸಿಕೊಳ್ತಾರೆ ಎಂದರು.
ನಮ್ಮ ಹೆಮ್ಮೆಯ ರಾಷ್ಟ್ರಪತಿಗಳು ದಲಿತವರ್ಗದವರು. ಬಿಜೆಪಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದವರು ಸುಮಾರು ೫೪ ಸಂಸದರಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಒಳ್ಳೇಯ ಬೆಲೆಕೊಟ್ಟ ಸರ್ಕಾರ ಅಂದರೆ ಅದು ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದ ಸರಕಾರ . ಮೋದಿಯವರು ಹಿಂದುಳಿದ ವರ್ಗದ ಜನರಿಗೆ ವಿವಿಧ ಯೋಜನೆ ಜಾರಿಗೊಳಿಸಿದ್ದಾರೆ. ಹಿಂದುಳಿದ ವರ್ಗವನ್ನು ಸಮಾಜದ ಮುಂದುವರಿದ ವರ್ಗ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯ. ಅಲ್ಲದೆ ಭ್ರಷ್ಟಾಚಾರ ಮುಕ್ತ ಸರಕಾರ ಎಂಬ ಹೆಗ್ಗಳಿಕೆ ಪಡೆದ ಮೋದಿ ಸರಕಾರಕ್ಕೆ ನಿಮ್ಮ ಬೆಂಬಲದ ಅಗತ್ಯ ಇದೆ ಎಂದರು.
ಕಾರ್ಯಕ್ರಮದಲ್ಲಿ ಗಣೇಶ್ ಹೊಸಬೆಟ್ಟು, ರಾಜೇಶ್ ಕೊಟ್ಟಾರಿ, ವಸಂತ್ ಕುಮಾರ್, ಕಿರಣ್ ಕುಮಾರ್, ಆನಂದ ಪಾಂಗಲಾ, ಎಸ್ ಸಿ ಮೋರ್ಚಾದ ಅಧ್ಯಕ್ಷ ಉಮೇಶ್ ಕೋಟ್ಯಾನ್ ವಾಮಂಜೂರು, ಅಶೋಕ್ ಅಂಬೇಡ್ಕರ್ ನಗರ, ಗೋಪಾಲ, ರಾಧಾಕೃಷ್ಣ , ಮೋನಪ್ಪ, ರೋಶನ್, ಅಭಿಷೇಕ್ ಇನ್ನಿತರರು ಉಪಸ್ಥಿತರಿದ್ದರು.