ದಶಕದ ಕನಸು ; ಹರ್ಷೋದ್ಗಾರದ ನಡುವೆ ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ
ಚಿತ್ರಗಳು: ಪ್ರಸನ್ನ ಕೊಡವೂರು, ಟೀಮ್ ಮ್ಯಾಂಗಲೋರಿಯನ್
ಉಡುಪಿ : ಉಡುಪಿ ನಗರಸಭೆ ವತಿಯಿಂದ, ಮಲ್ಪೆ ಪಡುಕೆರೆ ನಿವಾಸಿಗಳ ದಶಕಗಳ ಕಾಲದ ಕನಸಾದ ಮಲ್ಪೆ ಪಡುಕೆರೆ ಸಂಪರ್ಕ ಕಲ್ಪಿಸುವ ರೂ.16.91 ಕೋಟಿ ವೆಚ್ಚದ ಸೇತುವೆಯನ್ನು ರಾಜ್ಯ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ನೆರವೇರಿಸಿದರು.
ತಮ್ಮ ಸಂದೇಶದಲ್ಲಿ ಇಂದಿನ ದಿನ ಪಡುಕೆರೆಯ ಭಾಗದ ಜನರಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದ್ದು, ಈ ಭಾಗದ ಹಲವು ವರುಷಗಳ ಕನಸಿಗೆ ದನಿಯಾಗಿ ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸೇತುವೆಯ ಮಂಜೂರಾತಿ ಪಡೆಯಲು ಶ್ರಮಿಸಿದ ದಿವಂಗತ ಡಾ ವಿ|ಎಸ್| ಆಚಾರ್ಯ, ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಸ್ಮರಿಸಿ ಧನ್ಯವಾದವನ್ನು ಅರ್ಪಿಸಿದ ಸಚಿವ ಪ್ರಮೋದ್ ಅವರು ಮುಂದುವರೆಸಿ ಈ ಸೇತುವೆಯಿಂದ ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆದಂತಾಗಿದೆ, ಈ ಸೇತುವೆ ನಿರ್ಮಾಣದಿಂದ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಲಿದ್ದು, ಪಡುಕೆರೆ ಬೀಚ್ ನ್ನು ದೇಶದ ಅತ್ಯಂತ ಸುಂದರ ಬೀಚ್ ಆಗಿ ಪರಿವರ್ತಿಸಲಾಗುವುದು, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಗೆ ಈ ಬೀಚ್ ನ್ನು ಸೇರಿಸಿ ಅಭಿವೃದ್ದಿಗೊಳಿಸಲಾಗುವುದು, ಪಡುಕೆರೆಯಿಂದ ಮಲ್ಪೆಗೆ 3 ನರ್ಮ್ ಬಸ್ ಗಳ ಸಂಚಾರಕ್ಕೆ ಮಂಜೂರು ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಬಾರಿಯ ಬಜೆಟ್ ನಲ್ಲಿ ಮೀನುಗಾರರಿಗೆ ಡೀಸೆಲ್ ಸಬ್ಸಿಡಿಗಾಗಿ 157 ಕೋಟಿ ಮಂಜೂರಾಗಿದೆ, ಏಪ್ರಿಲ್ 1 ರಿಂದ ಸಾಧ್ಯತಾ ಪತ್ರ ಇಲ್ಲದ ಮತ್ತು ಬ್ಯಾಂಕ್ ಖಾತೆ ಇಲ್ಲದ ಮೀನುಗಾರರಿಗೆ ಸಹ ಸಬ್ಸಿಡಿ ಮೊತ್ತ ನೀಡಲು ಕ್ರಮ ಕೈಗೊಳ್ಳಲಾಗುವುದು ಮೀನುಗಾರಿಕಾ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ 337 ಕೋಟಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಇದುವರೆವಿಗೆ ಸೇತುವೆಗಳ ನಿರ್ಮಣಕ್ಕಾಗಿ 77.50 ಕೋಟಿ ಅನುದಾನ ದೊರೆತಿದೆ, ಮಲ್ಪೆಯಲ್ಲಿ ಯುಜಿಡಿ ಮತ್ತು 24 ಗಂಟೆಗಳ ಕುಡಿಯುವ ನೀರು ಕಾಮಗಾರಿಗಾಗಿ ಕುಡ್ಸೆಂಪ್ ನಿಂದ 320 ಕೋಟಿ ಮಂಜೂರು ಅಗಿದೆ ಹಾಗೂ ಮಲ್ಪೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಣಕ್ಕಾಗಿ 4.60 ಕೋಟಿ ಮಂಜೂರು ಆಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾತಿಲಕ ರಾಜ್, ಸದಸ್ಯರುಗಳಾದ ಸೆಲಿನಾ ಕರ್ಕಡ, ಹಾರ್ಮಿಸ್ ನೊರೊನ್ಹಾ, ವಿಜಯ್ ಕುಂದರ್, ವಿಜಯ್ ಮಂಚಿ, ಯುವರಾಜ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಪ್ರಶಾಂತ್ ಭಟ್, ವಿಜಯ್ ಮಂಚಿ, ಶಶಿರಾಜ್ ಕುಂದರ್, ಪ್ರಶಾಂತ್ ಅಮೀನ್, ಜನಾರ್ಧನ್ ಭಂಡಾರ್ಕರ್ , ನಗರಾಭಿವೃದ್ದಿ ಪ್ರಾಧಿಕರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿ.ಪಂ. ಸದಸ್ಯ ಜನಾರ್ಧನ ತೋನ್ಸೆ, ಮೀನುಗಾರರ ಮುಖಂಡರಾದ ಆನಂದ್ ಕುಂದರ್, ಹಿರಿಯಣ್ಣ ಕಿದಿಯೂರು, ಮಾಜಿ ಜಿಪಂ ಸದಸ್ಯ ದಿವಾಕರ ಕುಂದರ್, ಸೇತುವೆ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಯೋಜಕಾ ಇಂಡಿಯ ಕಂಪೆನಿಯ ಜಗದೀಶ್ ಬೋಳೂರು, ತಹಸೀಲ್ದಾರ್ ಮಹೇಶ್ಚಂದ್ರ, ನಗರಸಭೆಯ ವಿವಿಧ ಸದಸ್ಯರುಗಳು ಉಪಸ್ಥಿತರಿದ್ದರು. ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ಸತೀಶ್ ಅಮೀನ್ ಪಡುಕೆರೆ ವಂದಿಸಿದರು.