ದಸರಾ ಸಂಭ್ರಮ; ಮಾವುತರು, ಕಾವಾಡಿಗರಿಗೆ ಶೋಭಾ ಕರಂದ್ಲಾಜೆಯಿಂದ ಉಪಹಾರ ಕೂಟ
ಮೈಸೂರು: ಜಿಲ್ಲೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಜಂಬೂ ಸವಾರಿಯ ಸಿದ್ಧತೆಯ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದೆ.
ದಸರಾ ಹಿನ್ನೆಲೆ ಇಂದು ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಉಪಹಾರ ಕೂಟ ನಡೆಸಲಾಯಿತು. ಸಂಸದೆ ಶೋಭಾ ಕರಂದ್ಲಾಜೆ ಉಪಹಾರ ಕೂಟ ಆಯೋಜನೆ ಮಾಡಿದ್ದಾರೆ. ಸ್ವತಃ ಶೋಭಾ ಕರಂದ್ಲಾಜೆ ಅವರೇ ಮಾವುತರಿಗೆ ಉಪಹಾರ ಬಡಿಸಿದ್ರು. ಈ ವೇಳೆ ಶಾಸಕ ಎಲ್.ನಾಗೇಂದ್ರ, ಮೂಡಾ ಅಧ್ಯಕ್ಷ ರಾಜೀವ್ ಕೂಡ ಉಪಸ್ಥಿತರಿದ್ದರು.
ನವರಾತ್ರಿಯ ಎಂಟನೇ ದಿನವಾದ ಇಂದು ರಾಜವಂಶಸ್ಥ ಯದುವೀರ್ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಹಾಗೂ ದುರ್ಗಾ ದೇವಿ ಪೂಜೆ ನಡೆಯಲಿದೆ. ಈ ದಿನವನ್ನ ಅಷ್ಟಮಿ ಎಂದು ಪೂಜಿಸುವುದು, ಬಿಳಿ ಬಣ್ಣದಿಂದ ಸಾಂಕೇತಿಸಲಾಗುವುದು ವಿಶೇಷ. ಪೂಜೆಗಾಗಿ ಅರಮನೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಒಂಟೆಗಳು ಪೂಜೆಯಲ್ಲಿ ಭಾಗಿಯಾಗಲಿವೆ.
ಕೇವಲ ಬೆರಳೆಣಿಕೆ ಪೋರೋಹಿತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನದಂತೆ ಖಾಸಗಿ ದರ್ಬಾರ್ ನಲ್ಲಿ ಯದುವೀರ್ ಒಡೆಯರ್ ಭಾಗಿಯಾಗಲಿದ್ದಾರೆ. ಅರಮನೆಯ ಕನ್ನಡಿ ತೊಟ್ಟಿಯಲ್ಲಿ ವಿವಿಧ ಪೂಜಾ ಕೈಂಕರ್ಯ ಜರುಗಲಿದೆ.