ದಿಗಂತ್ ನಾಪತ್ತೆ ಪ್ರಕರಣ| ಪ್ರಚೋದನಾಕಾರಿ ಭಾಷಣ ಮಾಡಿದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ: ರಮಾನಾಥ ರೈ

Spread the love

ದಿಗಂತ್ ನಾಪತ್ತೆ ಪ್ರಕರಣ| ಪ್ರಚೋದನಾಕಾರಿ ಭಾಷಣ ಮಾಡಿದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ: ರಮಾನಾಥ ರೈ

ಮಂಗಳೂರು: ಫರಂಗಿಪೇಟೆಯ ಯುವಕ ದಿಗಂತ್ ನಾಪತ್ತೆ ಪ್ರಕರಣ ಜಿಲ್ಲೆಯ ಪೊಲೀಸರ ಕಾರ್ಯಾಚರಣೆ ಮೂಲಕ ಸುಖಾಂತ್ಯ ಕಂಡಿದೆ. ಆದರೆ ನಾಪತ್ತೆ ಸಂದರ್ಭದಲ್ಲಿ ಯಾವುದೇ ಸುಳಿವಿಲ್ಲದಾಗ, ಸುಳ್ಳಿನ ಮೂಲಕ ಸಮಾಜದಲ್ಲಿ ದ್ವೇಷ ಹುಟ್ಟಿಸುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಪಕ್ಷದ ಹಾಗೂ ಸಂಘಟನೆಗಳ ಪ್ರಮುಖರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಮತೀಯ ಸೂಕ್ಷ್ಮ ಎಂಬ ಹಣೆಪಟ್ಟಿ ಇದೆ. ಇಂತಹ ಸಂದರ್ಭದಲ್ಲಿ ದಿಗಂತ್ ನಾಪತ್ತೆ ಪ್ರಕರಣವನ್ನು ಮತೀಯವಾದಿ ಸಂಘಟನೆಗಳು ಜನರಲ್ಲಿ ತಪ್ಪು ಭಾವನೆ ಮೂಡಿಸಿ ಸಮಾದಲ್ಲಿ ಸಾಮರಸ್ಯ ಕದಕುವ ಪ್ರಯತ್ನ ಮಾಡಿವೆ. ಸಮಾಜವು ಕೂಡಾ ಇಂತಹ ಪ್ರಕರಣಗಳ ಸಂದರ್ಭ ಮತೀಯವಾದಿಗಳಿಂದ ಕೋಮು ಸಾಮರಸ್ಯಕ್ಕೆ ಹಾನಿಯುಂಟುಮಾಡುವ ಕೃತ್ಯಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ಅಗತ್ಯ ಜಿಲ್ಲೆಯಲ್ಲಿ ಶರತ್ ಮಡಿವಾಳ ಹತ್ಯೆಯನ್ನೂ ಚುನಾವಣಾ ವಿಚಾರವಾಗಿಸಿ ಅಪಪ್ರಚಾರ ಮಾಡುವ ಮೂಲಕ ಮತೀಯವಾದಿಗಳು ನಮ್ಮ ಸೋಲಿಗೆ ಕಾರಣವಾಗಿದ್ದಾರೆ. ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಸೋಲಿಸಲು ಸಾಧ್ಯವಿಲ್ಲ ಎಂದು ಅರಿತು ಈ ರೀತಿಯ ಸುಳ್ಳು ಪ್ರಚಾರಗಳನ್ನು ಬಿಜೆಪಿ ನಡೆಸುತ್ತಾ ಬಂದಿರುವುದನ್ನು ನಾನು ನೋವಿನಿಂದ ನೆನಪಿಸಲು ಬಯಸುತ್ತೇನೆ ಎಂದರು.

ಮತೀಯ ಶಕ್ತಿಗಳಿಗೆ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ಅಭಿವೃದ್ಧಿಯಾಗುವುದು ಮುಖ್ಯವಲ್ಲ. ಆದರೆ ಹಿಂಸೆಗೆ ಅಹಿಂಸೆ, ದ್ವೇಷಕ್ಕೆ ಪ್ರೀತಿಯೇ ಉತ್ತರ ಎಂದು ತಿಳಿದವರು ನಾವು ಎಂದವರು ಹೇಳಿದರು.

ಕೋಮು ಸಂಘರ್ಷಕ್ಕೆ ದಾರಿಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ, ಕೋಮು ಪ್ರಚೋದನೆಗೆ ಕಾರಣ ಕರ್ತರು ಯಾರು ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸ್‌ನ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆಯಾಗಬೇಕು ಎಂಬುದು ನನ್ನ ಬಲವಾದ ಆಗ್ರಹವಾಗಿದೆ. ಕೋಮು ಪ್ರಚೋದಿತ ಹತ್ಯೆಯ, ಸಂಘರ್ಷಗಳ ಸೂತ್ರಧಾರಿಗಳಿಗೆ ಶಿಕ್ಷೆ ಆದಾಗ ದ.ಕ. ಜಿಲ್ಲೆ ಸಾಮರಸ್ಯದ ನೆಲೆಬೀಡಾಗುತ್ತದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಸಭೆಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಮಾಜಿ ಕಾರ್ಪೋರೇಟರ್‌ಗಳಾದ ಅಬ್ದುಲ್ ಲತೀಫ್, ಅಶೋಕ್ ಡಿ.ಕೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಅಧ್ಯಕ್ಷ ಅಬ್ದುಲ್ಲ ಉಪಸ್ಥಿತರಿದ್ದರು. ಮುಖಂಡರಾದ ಸುಧೀರ್ ಟಿ.ಕೆ., ಶಬೀರ್, ಅಬ್ಬಾಸ್ ಅಲಿ, ಅಪ್ಪಿ ಗಣೇಶ್ ಪೂಜಾರಿ, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments