ದಿನಬಳಕೆ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ, ಕೃತಕ ಅಭಾವ ಸೃಷ್ಠಿಸಿದಲ್ಲಿ ಕಠಿಣ ಕ್ರಮ- ಡಿಸಿ ಜಿ.ಜಗದೀಶ್ ಎಚ್ಚರಿಕೆ
ಉಡುಪಿ: ಜಿಲ್ಲೆಯಾದ್ಯಂತ ತರಕಾರಿ, ದಿನಸಿ, ಮೀನು, ಮಾಂಸ , ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲು ಮುಂತಾದವುಗಳನ್ನು ಮಾರಾಟ ಮಾಡುವ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಎದುರಿನಲ್ಲಿ ಕನಿಷ್ಠ 6 ಅಡಿಗಳ ಅಂತರದಲ್ಲಿ ಕಡ್ಡಾಯವಾಗಿ ಪೇಂಟ್ ಅಥವಾ ಇನ್ನಿತರ ಬಣ್ಣದ ವಸ್ತುಗಳಿಂದ ಗುರುತನ್ನು ಹಾಕುವುದು ಹಾಗೂ ಸಾರ್ವಜನಿಕರು/ಗ್ರಾಹಕರು ಸದ್ರಿ ಗುರುತುಗಳ ಸರತಿ ಸಾಲಿನಲ್ಲಿ ನಿಂತು ವಸ್ತುಗಳನ್ನು ಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.ಈ ನಿರ್ದೇಶನಗಳನ್ನು ಪಾಲಿಸದ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಅಲ್ಲದೇ ಯಾವುದೇ ಅಗತ್ಯ ವಸ್ತುಗಳನ್ನು ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡತಕ್ಕದ್ದಲ್ಲ, ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಲು , ಅನಾವಶ್ಯಕವಾಗಿ ಸಂಗ್ರಹಾಲಯಗಳಲ್ಲಿ ಇಂತಹ ವಸ್ತುಗಳನ್ನು ದಾಸ್ತಾನು ಮಾಡತಕ್ಕದ್ದಲ್ಲ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಮೇಲಿನ ನಿರ್ದೇಶನಗಳು ಪಾಲನೆಯಾಗುವಂತೆ ಸಂಬಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು/ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಗಳು ಕ್ರಮವಹಿಸಬೇಕು ತಪ್ಪದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.