ದಿಶಾ ಉದ್ಯೋಗ ಪರ್ವ ಫೆಬ್ರವರಿ 17 ರಂದು: 10000 ಮೀರಿದ ನೋಂದಣಿ
ದ.ಕ ಜಿಲ್ಲಾಡಳಿತ, ಉದ್ಯೋಗ ಮತ್ತು ತರಬೇತಿ ಇಲಾಖೆ, ಸಿಇಒಎಲ್ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ದಿಶಾ ಉದ್ಯೋಗ ಪರ್ವ ಫೆಬ್ರವರಿ 17 ರಂದು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನಡೆಯಲಿದೆ.
ಉದ್ಯೋಗ ಮೇಳವು ಈಗಾಗಲೇ ಪದವಿ, ಸ್ನಾತಕೋತ್ತರ, ನರ್ಸಿಂಗ್, ಐಟಿಐ, ಹೋಟೆಲ್ ಮ್ಯಾನೆಂಜ್ಮೆಂಟ್ ಮತ್ತು /ಡಿಪ್ಲೋಮ ಕೋರ್ಸನ್ ಪೂರ್ಣಗೊಳಿಸಿರುವ ಉದ್ಯೋಗ ಆಕಾಂಕ್ಷಿಗಳಿಗಾಗಿ ಈ ಉದ್ಯೋಗ ಮೇಳ ನಡೆಯಲಿದೆ. ಒಟ್ಟು 135 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಒಟ್ಟು 9000ಕ್ಕೂ ಅಧಿಕ ಉದ್ಯೋಗಗಳು ಲಭ್ಯವಿರುತ್ತದೆ.
ಅಭ್ಯರ್ಥಿಗಳ ಅನುಕೂಲಕ್ಕಾಗಿ ವೆಬ್ಸೈಟ್ www.mangaluruudyogamela.com ಇದರಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದ್ದು, ಸುಮಾರು 10,000 ದಷ್ಟು ಅಭ್ಯರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲೂ 2000 ರಷ್ಟು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿರುತ್ತಾರೆ. ಇದುವರೆಗೆ ನೋಂದಣಿ ಮಾಡದವರಿಗೆ ಶನಿವಾರ ಉದ್ಯೋಗ ಮೇಳ ನಡೆಯುವ ಸ್ಥಳದಲ್ಲೇ ಉದ್ಯೋಗಾಕಾಂಕ್ಷಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗ ಮೇಳಕ್ಕಾಗಿ ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯದ 169 ಕೊಠಡಿಗಳನ್ನು ಗೊತ್ತುಪಡಿಸಲಾಗಿದೆ. ಒಟ್ಟು 91 ಕಂಪ್ಯೂಟರ್ ವ್ಯವಸ್ಥೆಯಾಗಿದೆ. ಒಟ್ಟು ಮೂರು ಬ್ಲಾಕ್ ಗಳಲ್ಲಿ ಮಾನವಿಕ ವಿಭಾಗ, ವಿಜ್ಞಾನ ಸಂಕೀರ್ಣ ಮತ್ತು ಮ್ಯಾನೇಜ್ ಮೆಂಟ್ ಬ್ಲಾಕ್ನಲ್ಲಿ ಕಂಪೆನಿಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾಹಿತಿ ಇರುವ ಫಲಕಗಳನ್ನು ಅಳವಡಿಸಲಾಗಿದೆ.
ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮಂಗಳೂರು ವಿಶ್ವ ವಿದ್ಯಾನಿಲಯದ ಮಾನವಿಕ ವಿಭಾಗದ ಹತ್ತಿರ ಮುಖ್ಯ ನೋಂದಣಿ ಕೌಂಟರ್ ಹಾಕಲಾಗಿರುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಗೆ ಕಲರ್ ಕೋಡ್ ನೀಡಲಾಗುವುದು. ಅಭ್ಯರ್ಥಿಗಳ ಅನುಕೂಲಕ್ಕೆ ಆಳ್ವಾಸ್ ಕಾಲೇಜಿನ 300 ವಿದ್ಯಾರ್ಥಿಗಳು ಮತ್ತು 60 ಸಿಬ್ಬಂದಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕಾರ್ಯದಲ್ಲಿ ಕೆ.ಪಿ.ಟಿ ಯ 50 ವಿದ್ಯಾರ್ಥಿಗಳು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಕೈ ಜೋಡಿಸಲಿದ್ದಾರೆ.
ಉದ್ಯೋಗ ಮೇಳದಲ್ಲಿ ಸಾಕಷ್ಟು ಸ್ಥಳೀಯ ಕಂಪೆನಿಗಳು, ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿ ಸೆಕ್ಯೂರಿಟಿ, ಹೆಲ್ಪರ್ಸ್, ವಾರ್ಡನ್ಸ್ನಂತಹ ಉದ್ಯೋಗಕ್ಕೆ ಅವಕಾಶ ನೀಡಲಿದೆ. ಉದ್ಯೋಗ ಮೇಳದಲ್ಲಿ ವಿಶೇಷವಾಗಿ ಬಿಎಸ್ಸಿ ನರ್ಸಿಂಗ್ ಪದವಿದರಿಗೆ ಉತ್ತಮ ಅವಕಾಶಗಳಿವೆ. ಸಾಕಷ್ಟು ವೈದ್ಯಕೀಯ ರಂಗ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಬಿಎ/ಬಿಎಡ್ ಪದವೀಧರರಿಗೆ ಶೈಕ್ಷಣಿಕ ಉದ್ಯೋಗ ಅವಕಾಶಗಳಿವೆ.
ಐಟಿ ಕಂಪೆನಿಗಳು, ಬ್ಯಾಂಕಿಂಗ್, ಸೇಲ್ಸ್, ಮಾರ್ಕೆಟಿಂಗ್, ಇನ್ಸ್ಯೂರೆನ್ಸ್, ಉತ್ಪಾದನಾ ಸಂಸ್ಥೆಗಳು ಅಟೋಮೊಬೈಲ್ಸ್ ಕಂಪೆನಿಗಳು, ಹಣಕಾಸು, ಪೇ ಟಿಎಮ್, ಆಸ್ಪತ್ರೆಗಳು, ಹೋಟೆಲ್ಗಳು ಇನ್ನಿತರ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ.
‘ದಿಶಾ ಉದ್ಯೋಗ ಪರ್ವ’ ಪೂರ್ವಭಾವಿಯಾಗಿ ವಿವಿಧ ಉದ್ಯೋಗಗಳ ಮಾಹಿತಿ ನೀಡುವ ಓರಿಯಂಟೇಷನ್ ಕಾರ್ಯಕ್ರಮ ಫೆಬ್ರವರಿ 10 ರಂದು ಕರ್ನಾಟಕ ಪಾಲಿಟೆಕ್ನಿಕ್(ಕೆ.ಪಿ.ಟಿ) ಇಲ್ಲಿ ನಡೆಯಸಲಾಗಿತ್ತು. ಈ ತರಭೇತಿಯಲ್ಲಿ ವಿವಿಧ ಖಾಲಿ ಇರುವ ಹುದ್ದೆಗಳು, ಕಂಪೆನಿಗಳ ಮಾಹಿತಿ, ಅವುಗಳ ಸಾಧನೆಗಳ ವಿವರ ಹಾಗೂ ನೇಮಕಾತಿಗೊಳ್ಳುವ ಹುದ್ದೆಗಳ ಮಾಹಿತಿಗಳನ್ನು, ಸಂದರ್ಶನ ಎದುರಿಸುವ ಮಾಹಿತಿಗಳನ್ನು ಈಗಾಗಲೇ ತರಭೇತಿಯಲ್ಲಿ ಭಾಗಿಯಾದ ಅಭ್ಯರ್ಥಿಗಳಿಗೆ ನೀಡಲಾಗಿದೆ.
ಫೆ.17ರಂದು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಕೋಣಾಜೆವರೆಗೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ವಿಶೇಷ ಬಸ್ಗಳ ಸಂಚಾರ ನಡೆಯಲಿದೆ. ನಗರದ ಸ್ಟೇಟ್ಬ್ಯಾಂಕ್, ಪಿ.ವಿ.ಎಸ್. ಹಾಗೂ ಪಂಪ್ವೆಲ್ ಈ ಮೂರು ಸ್ಥಳಗಳಿಂದ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ವಿಶೇಷ ಬಸ್ಸ್ಗಳು ಸಂಚರಿಸಲಿವೆ. ಅದೇ ರೀತಿ ಅಪರಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೆ ಕೋಣಾಜೆಯಿಂದ ಮಂಗಳೂರಿಗೆ ವಿಶೇಷ ಬಸ್ಸ್ಗಳು ಸಂಚಾರ ನಡೆಸಲಿವೆ.
ಉದ್ಯೋಗಸ್ಥರ ಅವಶ್ಯಕತೆ ಇರುವಂತಹ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಕಾಲೇಜಿನ ಹಳೇ ವಿದ್ಯಾರ್ಥಿಗಳು ಈ ಮೇಳದ ಸದುಪಯೋಗ ಪಡೆದುಕೋಳ್ಳಬಹುದಾಗಿದೆ. ಎಂಜಿನಿಯರಿಂಗ್ ಪಧವಿದರರಿಗೆ ಮತ್ತು ಪ್ರಸ್ತುತ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸರಿಯಾದ ರೀತಿಯಲ್ಲಿ ಧೃಡ ನಿರ್ಧಾರದಿಂದಲೇ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕಾಗಿದೆ.
ದಿಶಾ ಉದ್ಯೋಗ ಪರ್ವ ಕಾರ್ಯಕ್ರಮದ ಉದ್ಘಾಟನೆಯು ಶನಿವಾರ ಬೆಳಿಗ್ಗೆ 9.30 ಕ್ಕೆ ಕೊಣಾಜೆಯ ಮಂಗಳೂರು ವಿಶ್ವ ವಿದ್ಯಾನಿಲಯ ಕ್ಯಾಂಪಸ್ನಲ್ಲಿ ನಡೆಯಲಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಆಹಾರ ಹಾಗೂ ನಾಗರೀಕ ಸರಬರಾಜು ಸಚಿವ ಯು.ಟಿ.ಖಾದರ್ ವಹಿಸಲಿದ್ದಾರೆ.