ದೀಪಾವಳಿ ಹಬ್ಬ ಮುಗಿದ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲಿಗೆ ಆಗ್ರಹ

Spread the love

ದೀಪಾವಳಿ ಹಬ್ಬ ಮುಗಿದ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲಿಗೆ ಆಗ್ರಹ

ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ- ಮಂಗಳೂರಿಗೆ ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಆದರೆ ಹಬ್ಬ ಮುಗಿಸಿ ವಾಪಸ್ ಬೆಂಗಳೂರಿಗೆ ರೈಲಿನ ಸೇವೆ ಕಲ್ಪಿಸದೇ ಇರುವುದು ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಹೀಗಾಗಿ ಹಬ್ಬದ ಬಳಿಕ ವಿಶೇಷ ರೈಲಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿದೆ.

ದಸರಾ ಹಬ್ಬದ ಸಂದರ್ಭ ಬೆಂಗಳೂರು- ಮಂಗಳೂರು ನಡುವೆ ಸಂಚಾರಕ್ಕಾಗಿ ಪ್ರಯಾಣಿಕರು ಪರದಾಟ ಅನುಭವಿಸಿದ ಹಿನ್ನೆಲೆಯಲ್ಲಿ ಸದ್ಯ ದೀಪಾವಳಿ ಹಬ್ಬದ ಸಂದರ್ಭ ಬೆಂಗಳೂರಿನಿಂದ- ಮಂಗಳೂರಿಗೆ ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಆದರೆ ಹಬ್ಬದ ಮುಗಿದ ನಂತರ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಕಲ್ಪಿಸದಿರುವುದು ಮತ್ತೆ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಹಬ್ಬದ ಆರಂಭದ ದಿನದಲ್ಲಿ ಅಂದರೆ ಅ.30 ರಂದು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಲು ವಿಶೇಷ ರೈಲು ಕಲ್ಪಿಸಲಾಗಿದ್ದು ಸ್ವಾಗತಾರ್ಹ. ಆದರೆ ಬಳಿಕ ಮಂಗಳೂರಿನಿಂದ ತೆರಳಲು ರೈಲಿನ ಅವಶ್ಯಕತೆ ಇದ್ದು ಈ ಬಗ್ಗೆ ಚಿಂತಿಸಬೇಕಿದೆ. ಅ.31 ರಿಂದ ನ.3 ರವರೆಗೆ ಸಾಲು ಸಾಲು ರಜೆ ಹಾಗೂ ವೀಕೆಂಡ್‌ ಕೂಡ ಆಗಿರುವುದರಿಂದ ಊರಿಗೆ ಬಂದವರು ತೆರಳಲು ಅವಶ್ಯಕವಾಗಿ ರೈಲು ವ್ಯವಸ್ಥೆ ಆಗಬೇಕಿದೆ. ನ.2 ಹಾಗೂ 3ರಂದು ಬಸ್‌ ದರವೂ ದುಪ್ಪಟ್ಟಾಗಿದ್ದು ಪ್ರಯಾಣಿಕರನ್ನು ಕಂಗಾಲಾಗಿಸಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹಾಗೂ ರೈಲ್ವೆ ಬಳಕೆದಾರರ ಮನವಿ ಬಳಿಕ ನೈರುತ್ಯ ರೈಲ್ವೆಯು ಯಶವಂತಪುರ- ಮಂಗಳೂರು ವಿಶೇಷ ರೈಲು ಅ.30 ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ ಮಂಗಳೂರು- ಯಶವಂತಪುರ ವಿಶೇಷ ರೈಲು ಮಂಗಳೂರಿನಿಂದ ಅ.31ರಂದು ಮಧ್ಯಾಹ್ನ 1 ಗಂಟೆಗೆ ಹೊರಟು ಅದೇ ದಿನ ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.

ದಸರಾ ಹಬ್ಬದ ಸಂದರ್ಭ ಊರಿಗೆ ಬಂದವರು ವಾಪಸ್‌ ಬೆಂಗಳೂರಿಗೆ ತೆರಳಲು ಸಮಸ್ಯೆ ಅನುಭವಿಸಿದ್ದರು. ಮುರುಡೇಶ್ವರ ಎಕ್ಸ್‌ಪ್ರೆಸ್‌ ಹಾಗೂ ಕಣ್ಣೂರು ಎಕ್ಸ್‌ಪ್ರೆಸ್‌ ಭರ್ತಿಯಾಗಿತ್ತು. ಜತೆಗೆ ವಿಶೇಷ ರೈಲು ಸೇವೆಯೂ ಇರಲಿಲ್ಲ. ಇನ್ನು ಬಸ್‌ ದರವಂತೂ ದುಪ್ಪಟ್ಟಾಗಿತ್ತು. ಕೆಲವರು 2 ಸಾವಿರದಿಂದ 3,500 ರೂ. ವರೆಗೆ ಟಿಕೆಟ್‌ ಪಾವತಿಸಿ ತೆರಳಿದ್ದರು. ಮಂಗಳೂರು- ಬೆಂಗಳೂರು ಹೋಗಿ ಬರಲು ಒಬ್ಬರಿಗೆ 5 ರಿಂದ 6 ಸಾವಿರ ಪಾವತಿಸಬೇಕಿತ್ತು. ಇನ್ನು ಧಾರ್ಮಿಕ ಕ್ಷೇತ್ರಗಳಿಗೆ ಬರುವವರಿಗೂ ಸಮಸ್ಯೆಯಾಗಿತ್ತು. ದೀಪಾವಳಿ ಹಬ್ಬದ ಸಂದರ್ಭ ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಬರುವವರು ಹಾಗೂ ತೆರಳುವವರ ಸಂಖ್ಯೆ ಹೆಚ್ಚಳವಾಗುವುದು ಸಹಜ. ಆದ್ದರಿಂದ ಈಗಾಗಲೇ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಒದಗಿಸಿರುವುದು ಖುಷಿಯ ಸಂಗತಿ. ಆದರೆ ಊರಿಗೆ ಬಂದವರು ಮರಳಿ ಹೋಗೋದು ಹೇಗೆ ಎಂಬುದೇ ಸಮಸ್ಯೆ. ಆದ್ದರಿಂದ ಮಂಗಳೂರಿನಿಂದ ತೆರಳಲು ಕೂಡ ವಿಶೇಷ ರೈಲಿನ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಬೇಕಿದೆ.


Spread the love
Subscribe
Notify of

0 Comments
Inline Feedbacks
View all comments