ದುಬೈ: ಪ್ರತಿವರ್ಷವೂ ವಿಜೃಂಭಣೆಯಿಂದ ಮತ್ತು ವಿಭಿನ್ನವಾಗಿ ದುಬೈಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಾ ಬಂದಿರುವ ಕನ್ನಡಿಗರು ದುಬೈ ಸಂಘಟನೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಇನ್ನಷ್ಟು ವಿಜೃಂಭಣೆ ಮತ್ತು ಸಮಾಜದ ಹಲವು ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಜನರ ಮನ ಗೆದ್ದಿರುವ ಕನ್ನಡಿಗರನ್ನು ಆಹ್ವನಿಸುವ ಮೂಲಕ ಆಚರಿಸಲು ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ.
ನವೆಂಬರ್ 13ರ ಶುಕ್ರವಾರದಂದು ನಗರದ ಅಲ್ ಬರ್ಶಾ ಪ್ರದೇಶದಲ್ಲಿರುವ ಜೆ.ಎಸ್.ಎಸ್. ಇಂಟರ್ ನ್ಯಾಶನಲ್ ಶಾಲಾ ಸಭಾಂಗಣದಲ್ಲಿ ಪ್ರೆಶಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ಎಲ್.ಎಲ್.ಸಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಹಾಗೂ ಜಾತ್ಯಾತೀತ ಜನತಾದಳ ಪಕ್ಷದ ಅಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ ಹೆಚ್. ಡಿ. ದೇವೇಗೌಡರು ಆಗಮಿಸಲಿದ್ದಾರೆ. ಇವರೊಂದಿಗೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ, ನಿರ್ದೇಶಕ ಮತ್ತು ನಿರ್ಮಾಪಕ ದ್ವಾಕರೀಶ್ ರವರೂ ಆಗಮಿಸಲಿದ್ದು ವೇದಿಕೆಯ ಮೌಲ್ಯವನ್ನು ಹೆಚ್ಚಿಸಲಿದ್ದಾರೆ. ಇವರೊಂದಿಗೆ ಖ್ಯಾತ ಪತ್ರಕರ್ತೆ ಮತ್ತು ಸುವರ್ಣ 24X7 ನ ವಿಶೇಷ ತನಿಖಾ ವಿಭಾಗದ (special investigative Department) ನಿರೂಪಕಿಯಾಗಿರುವ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ರವರು ಆಗಮಿಸಲಿದ್ದಾರೆ. ಸುಚಿತ್ರಾ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕ್ಯಾಡೆಮಿಯ ಚೇರ್ಮನ್ನರಾದ ಶ್ರೀ ಕೆ.ವಿ.ಆರ್. ಟ್ಯಾಗೋರ್ ಸಹಾ ಉಪಸ್ಥಿತರಿರಲಿದ್ದಾರೆ.
ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಖ್ಯಾತ ಕನ್ನಡಿಗರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಈ ವರ್ಷದಿಂದ ’ಕನ್ನಡ ರತ್ನ’ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದು ಈ ವರ್ಷ ಕನ್ನಡ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಶ್ರೀ ದ್ವಾರಕೀಶ್ ಆಯ್ಕೆಯಾಗಿದ್ದು ಅವರಿಗೆ ಈ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.
’ಮಾತಿನ ಮಲ್ಲಿ’ ಎಂದೇ ಹೆಚ್ಚು ಜನಪ್ರಿಯರಾಗಿರುವ ಸಂಧ್ಯಾ ಶಣೈಯವರು ತಮ್ಮ ಅಪ್ಪಟ ಗ್ರಾಮ್ಯ ಮತ್ತು ಆತ್ಮೀಯ ಮಾತುಗಳಿಂದ ಹಾಸ್ಯದೊಂದಿಗೆ ನಕ್ಕು ನಗಿಸುತ್ತಲೇ ಜೀವನದ ಸತ್ಯಗಳ ಕಹಿಯನ್ನು ಸಿಹಿಯಾಗಿ ಉಣಿಸಲಿದ್ದಾರೆ.
ಇನ್ನುಳಿದಂತೆ ಕನ್ನಡಕ್ಕಾಗಿ ಕಲಾಕ್ಷೇತ್ರದ ಮೂಲಕ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀ ಮಂಡ್ಯ ರಮೇಶ್, ಶ್ರೀ ಟೆನ್ನಿಸ್ ಕೃಷ್ಣ, ಮಂಜುಭಾಷಿಣಿ, ಶ್ರೀ ಪ್ರಶಾಂತ್ ನೀರ್ಗುಂಗ್ ಹಾಗೂ ರೂಪ ಪ್ರಭಾಕರ್ ಸಹಿತ ಹಲವು ಗಣ್ಯರು ಆಗಮಿಸಲಿದ್ದು ತಮ್ಮ ಹಾಸ್ಯದಿಂದ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.
ತಮ್ಮ ವೃತ್ತಿಜೀವನದ ಮಹತ್ವದ ಘಟನೆ ಮತ್ತು ಸಮಾಜದಲ್ಲಿ ಎಚ್ಚರಿಕೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರೀಮತಿ ವಿಜಯಲಕ್ಷ್ಮಿಯವರು ಹಲವು ಮಹತ್ವದ ಸಂಗತಿಗಳನ್ನು ತಿಳಿಸಲಿದ್ದು ಸಭಿಕರಿಗೆ ಒಂದು ಹೊಸ ಅನುಭವ ದೊರಕಲಿದೆ. ಸಾಂಸ್ಕೃತಿಯ ಕಾರ್ಯಕ್ರಮಗಳಿಗೂ ಎಂದಿನಂತೆ ಹೆಚ್ಚಿನ ಒತ್ತು ನೀಡಲಾಗಿದ್ದು ಯು.ಎ.ಇ.ಯಲ್ಲಿರುವ ಕನ್ನಡಿಗರ ವಿವಿಧ ಸಂಸ್ಥೆಗಳ ಸದಸ್ಯರಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳೂ ನಡೆಯಲಿವೆ. ಈ ಬಾರಿ ವಿಶೇಷವಾದ ಆಕರ್ಷಣೆಯಾಗಿ ಫ್ಯಾಷನ್ ಷೋ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ರೂಪದರ್ಶಿಗಳು ನೂತನ ವಸ್ತ್ರವಿನ್ಯಾಸವನ್ನು ತಮ್ಮ ಬೆಡಗು ಬಿನ್ನಾಣಗಳಿಂದ ಪ್ರದರ್ಶಿಸುವುದನ್ನು ಕಣ್ಣಾರೆ ನೋಡಬಹುದಾಗಿದೆ. ಬೆಂಗಳೂರಿನಿಂದ ಆಗಮಿಸಲಿರುವ ನೃತ್ಯ ಕಲಾ ತಂಡದಿಂದ ಕರ್ನಾಟಕದ ಭವ್ಯ ನೃತ್ಯಕಲಾ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ.
1997 ರಲ್ಲಿ ಯು.ಎ.ಇ.ಯ ಅಜ್ಮಾನ್ ಸಂಸ್ಥಾನದ ಆಡಳಿತಗಾರರಿಂದಲೇ ವೈದ್ಯಕೀಯ ಶಿಕ್ಷಣಾ ಸಂಸ್ಥೆಯನ್ನು ಸ್ಥಾಪಿಸಲು ಆಹ್ವಾನ ಪಡೆದ, ಬಳೀಕ ತುಂಬೆ ಶಿಕ್ಷಣ ಸಂಸ್ಥೆ ಮತ್ತು ಆರೋಗ್ಯ ಘಟಕವನ್ನು ಸ್ಥಾಪಿಸಿ ಇಂದು ಯುಎಇ ಯ ಎಲ್ಲಾ ನಗರಗಳಲ್ಲಿ ಶಾಖೆಗಳನ್ನು ಹೊಂದಿರುವ ತುಂಬೆ ಸಮೂಸ ಸಂಸ್ಥೆಗಳ ಸ್ಥಾಪಕರೂ, ಅಧ್ಯಕ್ಷರೂ ಆಗಿರುವ ಗೌರವಾನ್ವಿತ ಶ್ರೀ ತುಂಬೆ ಮೊಯ್ದೀನ್ ಯವರೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನ 13ರ ಶುಕ್ರವಾರದ ಸಂಜೆಯನ್ನು ಬೇರಾವ ಕಾರ್ಯಕ್ರಮಕ್ಕೂ ಮೀಸಲಾಗಿರಿಸದಿರಲು ಇಂದೇ ನಿಮ್ಮ ಕ್ಯಾಲೆಂಡರುಗಳಲ್ಲಿ ಗುರುತು ಹಾಕಿ ಬಿಡಿ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡಕ್ಕಾಗಿ ತಮ್ಮ ಸಮಯ ಮತ್ತು ಶ್ರಮವನ್ನು ಮೀಸಲಿರಿಸಿ ದುಡಿಯುತ್ತಿರುವ ಸದಸ್ಯರಿಗೆ ನಿಮ್ಮ ಬೆಂಬಲ ಸೂಚಿಸಿ.
ಇಂತಿ ತಮ್ಮ ಅಗಮನಾಭಿಲಾಷಿಗಳು
ಅಧ್ಯಕ್ಷರು ಮತ್ತು ಸದಸ್ಯರು
ಕನ್ನಡಿಗರು ದುಬೈ.
ಹೆಚ್ಚಿನ ವಿವರಗಳಿಗೆ:
ಶ್ರೀ ಸಾದನ್ ದಾಸ್: 0507576238
ಶ್ರೀಮತಿ ಉಮಾ ವಿದ್ಯಾಧರ್: 0529928925
ಶ್ರೀ ಮಲ್ಲಿಕಾರ್ಜುನ ಗೌಡ: 0502433263
ಶ್ರೀ ಬಸವರಾಜ ಸಾಲಿಮಠ್: 0551467251
ಶ್ರೀ ನಟರಾಜ್: 0506408764
ಶ್ರೀ ಶಿವಕುಮಾರ್: 0509459833
ಈ ಮೇಲ್: kannadadigaru@hotmail.com