ದೇವೇಗೌಡ – ಯುಡಿಯೂರಪ್ಪ ಟೆಲಿಫೋನ್ ಮಾತುಕತೆ ವಿಚಾರದಲ್ಲಿ ಅವರನ್ನೇ ಕೇಳಿ – ಸಿದ್ದರಾಮಯ್ಯ
ಉಡುಪಿ: ದೇವೇಗೌಡ ಯುಡಿಯೂರಪ್ಪ ಟೆಲಿಫೋನ್ ಮಾತುಕತೆ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ ಆದ್ದರಿಂದ ಅದರ ಬಗ್ಗೆ ನಾನು ಏನು ಮಾತನಾಡಿಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಮಂಗಳವಾರ ಸಂಜೆ ಉಡುಪಿ ಬಳಿಯ ಕಾಪುವಿನ ಸಾಯಿರಾಧ ರೆಸಾರ್ಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮೈತ್ರಿ ಸರಕಾರ ಬೀಳೊಕೆ ಯಾರು ಕಾರಣ ಅನ್ನೋದಿಕ್ಕೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ, ದೇವೆಗೌಡರು ಆರೋಪ ಮಾಡಿದಷ್ಟು ಸಲ ಉತ್ತರ ಕೊಡಲು ಸಾಧ್ಯವಿಲ್ಲ. ಉಪಚುನಾವಣೆ ಯಲ್ಲಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳುತ್ತಾ ನನಗೆ ಗೊತ್ತಿಲ್ಲ. ಇವರ ಒಳ ಒಪ್ಪಂದದ ಬಗ್ಗೆ ನಾನು ಏನೂ ಹೇಳಲ್ಲ ಎಂದ ಸಿದ್ದರಾಮಯ್ಯ, ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಇಲ್ವೋ ನಾನೂ ಕೂಡ ಸಾಕಷ್ಟು ಊಹಾ ಪೋಹ ಗಳನ್ನು ಕೇಳ್ತಾ ಇದೇನೆ ಅಷ್ಟೇ ಊಹಾಪೋಹಾಗಳಿಗೆ ನಾನು ಉತ್ತರಿಸಲ್ಲ. ದೇವೇ ಗೌಡ ಯುಡಿಯೂರಪ್ಪ ಸಿಕ್ಕಿದ್ರೆ ಅವರನ್ನೇ ಕೇಳಿ ಎಂದರು.
ಯುಡಿಯೂರಪ್ಪ ಆಡಿಯೋ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಯುಡಿಯೂರಪ್ಪ ಅವರದ್ದೇ ಆಡಿಯೋ ಅಂತಾ ಒಪ್ಪಿಕೊಂಡಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಟ್ರೆ ಯಾವುದನ್ನು ನಂಬೋದು. ಈ ಪ್ರಕರಣ ಈಗಾಗಲೇ ಸುಪ್ರೀಂ ಮೆಟ್ಟಲೇರಿದ್ದು ನಮ್ಮ ವಕೀಲರು ಇವತ್ತು ವಾದವನ್ನೂ ಮಂಡಿಸಿದ್ದಾರೆ. ಈ ಆಡಿಯೋದಿಂದ ಅಮಿತ್ ಶಾ ಕುಮ್ಮಕ್ಕು ಬಹಿರಂಗವಾಗಿದೆ. ಗೃಹ ಸಚಿವರೇ ಹೀಗೆ ಮಾಡಿದ್ರೆ ದೇಶದಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಉಳಿಯುತ್ತಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ಗೆ ಶನಿ, ಅವರು ಪಕ್ಷವನ್ನು ಮುಗಿಸಿಯೇ ಹೋಗುವುದು ಎಂಬ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ್ ಪೂಜಾರಿಯವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ ಅವರು ನೋ ರಿಯಾಕ್ಷನ್ ಟು ಮಿಸ್ಟರ್ ಜನಾರ್ಧನ್ ಪೂಜಾರಿ ಎಂದರು.
ಸಿದ್ದರಾಮ್ಯಯ್ಯ ಅವರು ಬುಧವಾರ ಉಡುಪಿಯಲ್ಲಿ ಜರಗುವ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಆಯೋಜಿಸಿರುವ ಗಾಂಧಿ 150 ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಉಡುಪಿಗೆ ಆಗಮಿಸಿದ್ದಾರೆ.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು ಆರ್ ಸಭಾಪತಿ ಹಾಗೂ ಇತರರು ಉಪಸ್ಥಿತರಿದ್ದರು.