ದೇಶದ ಏಕತೆಗಾಗಿ ಬಲಿಷ್ಠ ಸಂವಿಧಾನ ನೀಡಿದವರು ಬಿ ಆರ್ ಅಂಬೇಡ್ಕರ್ – ರಶ್ಮಿ ಎಸ್ ಆರ್
ಕುಂದಾಪುರ: ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಭೌಗೋಳಿಕವಾಗಿ ಭಿನ್ನವಾಗಿರುವ ನಮ್ಮ ದೇಶವನ್ನು ಏಕತೆಯಲ್ಲಿ ಇಡುವ ಉದ್ದೇಶದಿಂದ ಡಾ. ಬಿ ಆರ್ ಅಂಬೇಡ್ಕರ್ ಅವರು ಬಲಿಷ್ಠವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಎಷ್ಟೋ ಮಂದಿ ಕಡು ಬಡತನದಲ್ಲಿ ಹುಟ್ಟಿದವರು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ ಕೀರ್ತಿ ನಮ್ಮ ದೇಶಕ್ಕಿದೆ. ಇವೆಲ್ಲವೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ದ್ವಜಾರೋಹಣಗೈದು, ಪಥಸಂಚಲನೆಯ ಗೌರವರಕ್ಷೆ ಸ್ವೀಕರಿಸಿ ಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಹೊರ ತರುವ ಪ್ರತಿಯೊಂದು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪುತ್ತವೆ. ಮೂಲಭೂತ ಹಕ್ಕುಗಳಂತೆಯೇ ಮೂಲಭೂತ ಕರ್ತವ್ಯಗಳಿಗೂ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು.
ನಗರ ಠಾಣಾಧಿಕಾರಿಗಳಾದ ಪ್ರಸಾದ್ ಕಮಾಂಡ್ ನೀಡಿದರೆ, ವಿನಯ ಕೊರ್ಲಹಳ್ಳಿ ನೇತೃತ್ವದಲ್ಲಿ ಪೆÇಲೀಸರ ತಂಡ, ಪುರಸಭೆಯ ಪೌರ ಕಾರ್ಮಿಕರ ತಂಡ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಂತ ಜೋಸೆಫ್ ಹಿ.ಪ್ರಾ. ಶಾಲೆ ತಂಡ ಬ್ಯಾಂಡ್ ಸೆಟ್‍ನಲ್ಲಿ ಸಹಕರಿಸಿತು.
ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಕೃಷಿ ಪ್ರಶಸ್ತಿಯನ್ನು ಕರುಣಾಕರ ಶೆಟ್ಟಿ ಕೆದೂರು, ನಿತ್ಯಾನಂದ ಶೇರೆಗಾರ್ ಬೀಜಾಡಿ, ಉಷಾ ಬಾಯರಿ ಕೆದೂರು, ಇಂದಿರಾ ಶೆಡ್ತಿ ಹಳ್ನಾಡು, ಲಕ್ಷ್ಮೀ ಕಾಳಾವರ, ರುಕ್ಕು ಕಾಳಾವರ, ಶ್ರೀನಿವಾಸ ಶಾನುಭಾಗ್ ಕುಂದಬಾರಂದಾಡಿ, ಬಿ. ರತ್ನಾಕರ ಶೆಟ್ಟಿ ಉಳ್ಳೂರು-74, ನಾರಾಯಣ ಶೆಟ್ಟಿ ಹೇರೂರು, ಬಚ್ಚು ದೇವಾಡಿಗ ಕಟ್‍ಬೇಲ್ತೂರು, ಸತೀಶ ಶೇರಿಗಾರ್ ಕಂದಾವರ ಅವರಿಗೆ ಪ್ರದಾನ ಮಾಡಲಾಯಿತು.
ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಬಿ.ಆರ್. ರಾವ್ ಪ್ರಾಥಮಿಕ ಶಾಲೆ, ಶಾಸಕರ ಮಾದರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು. ಇದೇ ವೇಳೆ ಕಾರ್ಮಿಕರ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‍ಟಾಪ್‍ಗಳನ್ನು ಹಸ್ತಾಂತರಿಸಲಾಯಿತು.
ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ ಕೆ.ಯು., ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ವಿ.ರಾವ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಪುರಸಭಾ ಸದಸ್ಯರು, ಮಾಜಿ ಸದಸ್ಯರು, ವೃತ್ತ ನಿರೀಕ್ಷಕ ನಂದಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಸಿಡಿಪಿಒ ಅನುರಾಧ, ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಕುಸುಮಾಕರ ಶೆಟ್ಟಿ, ಕೃಷಿ ಇಲಾಖೆಯ ರೂಪಾ ಮಾಡ, ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಮೀನುಗಾರಿಕಾ ಇಲಾಖೆಯ ಸುಮಲತಾ, ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಸ್ವಾಗತಿಸಿ, ಬಿಇಒ ಶೋಭಾ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.