ದ್ವಿಚಕ್ರ ವಾಹನ, ಲಾರಿ ಚಾಲಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

Spread the love

ದ್ವಿಚಕ್ರ ವಾಹನ, ಲಾರಿ ಚಾಲಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು : ಮಂಗಳೂರು ಕದ್ರಿ ಪೂರ್ವ ಪೋಲಿಸ್ ಠಾಣೆಯ ವ್ಯಾಪ್ತಿ ಮತ್ತು ಮಂಗಳೂರು ನಗರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಹಾಗೂ ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಮಲಗುತ್ತಿದ್ದ ಲಾರಿ ಚಾಲಕರ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಕದ್ರಿ ಪೂರ್ವ ಪೋಲಿಸ್ ಠಾಣೆಯ ಪೋಲಿಸರು ಬಂಧಿಸಿ ಅವರಿಂದ ರೂ 2.5ಲಕ್ಷ ಮೌಲ್ಯದ ವಿವಿಧ ಮಾದರಿಯ 7 ದ್ವಿಚಕ್ರ ವಾಹನಗಳನ್ನು ಹಾಗೂ ಸುಮಾರು ರೂ 21000 ಮೌಲ್ಯದ 6 ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಬಂಧಿತರನ್ನು ಬಂಟ್ವಾಳ ಫರಂಗಿಪೇಟೆ ನಿವಾಸಿ ಮೊಹಮ್ಮದ್ ಸಾದತ್ (20), ಪಡೀಲ್ ನಿವಾಸಿ ಮೊಹಮ್ಮದ್ ರಾಝೀಕ್ (19) ಮತ್ತು ಸರ್ಫರಾಜ್ (25) ಎಂದು ಗುರುತಿಸಲಾಗಿದೆ.

ಆರೋಪಿಗಳಾದ ಸಾದತ್, ಮಹಮ್ಮದ್ ರಾಝೀಕ್, ಸರ್ಫರಾಜ್ ರವರು ಅಲ್ತಾಫ್ ಎಂಬಾತನೊಂದಿಗೆ ಸೇರಿಕೊಂಡು 2017 ಮತ್ತು 2018 ರಲ್ಲಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಕಡೆಗಳಿಂದ ರಾತ್ರಿ ವೇಳೆ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಅದರ ನಂಬರ್ ಪ್ಲೇಟ್ ತೆಗೆದು ಹಾಗೂ ಬೇರೆ ನಂಬರ್ ಅಳವಡಿಸಿಕೊಂಡು ಮಾರಾಟ ಮಾಡಲು ಪ್ರಯತ್ನಿಸಿದ್ದು, ಇವರು ಬಿಕರ್ನಕಟ್ಟೆ, ಪಡೀಲ್ ಕಣ್ಣೂರು ಮಸೀದಿ, ಮರೋಳಿ ತಾರೆ ತೋಟ, ಬೊಂದೆಲ್, ಕೂಳೂರು, ಕೊಟ್ಟಾರ ಚೌಕಿ, ದೇರಳಕಟ್ಟೆ ಕಡೆ ವಿವಿಧ ಕಡೆಯಿಂದ ಅಕ್ಟೀವಾ ಸ್ಕೂಟರ್, ಹೊಂಡಾ ಡ್ರೀಮ್ ಬೈಕ್, ಪಲ್ಸರ್ ಬೈಕ್, ಟಿವಿಎಸ್ ವಿಕ್ಟರ್ ಬೈಕ್, ಹೀರೊ ಗ್ಲಾಮರ್ ಬೈಕ್ ಹೊಂಡಾ ಮೆಸ್ಟ್ರೋ ಸ್ಕೂಟರ್-ಡಿಸ್ಕವರಿ ಬೈಕ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡಲು ಪ್ರಯತ್ನ ನಡೆಸಿರುತ್ತಾರೆ. ಆರೋಪಿ ಅಲ್ತಾಫ್ ತಲೆ ಮರೆಸಿಕೊಂಡಿರುತ್ತಾನೆ.

ಆರೋಪಿ ಸಾದತ್ ವಿರುದ್ದ ಪಾಂಡೇಶ್ವರ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ, ಆರೋಪಿ ರಾಝೀಕ್ ವಿರುದ್ದ ಕಂಕನಾಡಿ ಠಾಣೆಯಲ್ಲಿ ಗಾಂಜಾ ಪ್ರಕರಣ, ಆರೋಪಿ ಸರ್ಪರಾಜನು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.


Spread the love