ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವೀತಿಯ ಸ್ಥಾನ
ಬೆಂಗಳೂರು: ವಿದ್ಯಾರ್ಥಿಗಳನ್ನು ತುದಿಗಾಲಲ್ಲಿ ನಿಲ್ಲಿಸಿರುವ ದ್ವಿತೀಯ ಪಿಯು ಫಲಿತಾಂಶ ಸೋಮವಾರ ಪ್ರಕಟವಾಗಿದೆ.
ಈ ಬಾರಿ ಹೊಸದಾಗಿ ಪರೀಕ್ಷೆ ಬರೆದವರಲ್ಲಿ ಶೇ.68 ರಷ್ಟು ವಿದ್ಯಾರ್ಥಿಗಳು ತೇರಗಡೆಯಾಗಿದ್ದಾರೆ. ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇ 59.56ರಷ್ಟು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಡುಪಿ 2 ನೇ ಸ್ಥಾನ ಹಾಗೂ ಕೊಡಗು ಜಿಲ್ಲೆ 3ನೇ ಸ್ಥಾನ ಪಡೆದಿದೆ. ಚಿಕ್ಕೋಡಿ ಜಿಲ್ಲೆ ಕೊನೆ ಸ್ಥಾನ ಗಳಿಸಿದೆ. ಈ ವರ್ಷದ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪಿಯು ಮಂಡಳಿಯ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ 67.48, ವಾಣಿಜ್ಯ ವಿಭಾಗದಲ್ಲಿ ಶೇ 63.64, ಕಲಾ ವಿಭಾಗದಲ್ಲಿ ಶೇ 45.13 ರಷ್ಟು ಫಲಿತಾಂಶ ಬಂದಿದೆ.
ಮೇ 1ರಂದು ರಾಜ್ಯದ ಎಲ್ಲಾ ಪಿಯು ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ಈ ಬಾರಿ ಒಟ್ಟು 4,725 ಕಾಲೇಜುಗಳಿಂದ 6,90,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪಡೆಯಲು, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 8ರಿಂದ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿ ಹೇಳಿದೆ.