ಧರ್ಮ ಸಂಸತ್: ನ. 10ರಂದು ಚಪ್ಪರ ಮುಹೂರ್ತ – ಸಂತರ ವಾಸ್ತವ್ಯಕ್ಕೆ ಅವಕಾಶ; ಮನವಿ
ಉಡುಪಿ: ಉಡುಪಿಯಲ್ಲಿ ನ.24,25, 26 ರಂದು ನಡೆಯುವ ಧರ್ಮಸಂಸತ್‍ನಲ್ಲಿ ದೇಶಾದ್ಯಂತ 2500 ಸಂತರು ಭಾಗವಹಿಸುತ್ತಿದ್ದು, ಜಿಲ್ಲೆಯ ಹಿಂದೂ ಬಾಂಧವರು ಸಂತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಧರ್ಮಸಂಸತ್ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಅಗಮಿಸುವ ಸಂತರ ಅತಿಥ್ಯ ಸಮಾಜದ ಕರ್ತವ್ಯವಾಗಿದ್ದು, 15 ಕಿ. ಮೀ. ವ್ಯಾಪ್ತಿಯ ಮನೆ, ಸಭಾಂಗಣದಲ್ಲಿ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಬಹುದು. ಜತೆಗೆ ವಾಹನ ಸೌಕರ್ಯ ಹೊಂದಿರುವವರು ಸಾಧುಗಳ ಸಂಚಾರದ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಸಕ್ತರು ಕಾರ್ಯಾಲಯವನ್ನು (0820-2524641) ಸಂಪರ್ಕಿಸಬಹುದು ಎಂದು ತಿಳಿಸಿದರು.
ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ನಗರದಲ್ಲಿ ಫ್ಲ್ಯಾಟ್ ಹೊಂದಿದ್ದು, ದೂರದೂರಿನಲ್ಲಿರುವವರು ಮನೆಯನ್ನು ಮೂರು ದಿನದ ಮಟ್ಟಿಗೆ ಸಂತರಿಗೆ ನೀಡಬಹುದು. ಈಗಾಗಲೇ 1200 ಸಂತರ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿದ್ದು, 800ಕ್ಕೂ ಮಿಕ್ಕಿ ಸಾಧುಗಳಿಗೆ ವಸತಿ ಸೌಕರ್ಯ ನಿಡಬೇಕಿದೆ. ಭಜನಾ ಮಂದಿರ, ಕಲ್ಯಾಣ ಮಂಟಪಲ್ಲೂ ಉಳಿಸಿಕೊಳ್ಳಬಹುದು. ಇಲ್ಲಿಗೆ ವಾಹನ ವ್ಯವಸ್ಥೆ ಸಮಿತಿ ಮೂಲಕ ಕಲ್ಪಿಸಲಾಗುವುದು. 2000 ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಾಲಯ ವ್ಯವಸ್ಥಾಪಕ ಮನೋಹರ್ ತುಳಜಾರಾಂ, ಭಜರಂಗದಳದ ವಿಭಾಗ ಸಂಚಾಲಕ ಶರಣ್ ಪಂಪ್ ವೆಲ್ , ಸುನೀಲ್ ಕೆ.ಅರ್. ಉಪಸ್ಥಿತರಿದ್ದರು.