ಧರ್ಮಸ್ಥಳದಲ್ಲಿ ಮೋದಿಯಿಂದ ರುಪೇ ಕಾರ್ಡ್ ವಿತರಣೆ; ನಗದು ರಹಿತ ವ್ಯವಹಾರ ಮುಂದುವರಿಸಿಲು ಕರೆ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ಜನಸೇವೆಯೇ ಜನಾರ್ಧನ ಸೇವೆಯೆಂಬ ಮಂತ್ರವನ್ನು ಜೀವನದ ಏಕಮೇವ ಗುರಿಯಾಗಿರಿಸಿಕೊಂಡಿದ್ದಾರೆ. ಅವರಿಂದ ಇನ್ನೂ 50 ವರ್ಷಗಳ ಸೇವೆ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ರುದ್ರಾಭಿಷೇಕ ನೆರವೇರಿಸಿದ ಬಳಿಕ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ರುಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಧರ್ಮಸ್ಥಳದ ಪಾವಿತ್ರ್ಯತೆ ಹಾಗೂ ಡಾ.ವಿರೇಂದ್ರ ಹೆಗ್ಗಡೆ ಅವರ ಜನಸೇವೆಯನ್ನು ಕೊಂಡಾಡಿದ್ದು, ಗೀತೆಯಲ್ಲಿ ಹೇಳಿದಂತೆ ಹೆಗಡೆಯವರು ನಿಷ್ಕಾಮ ಕರ್ಮ ಯೋಗಿಯಾಗಿದ್ದಾರೆ. ದೇಶದ ಕೋಟಿ ಕೋಟಿ ಜನತೆಗೆ ವಿರೇಂದ್ರ ಹೆಗ್ಗಡೆ ಯವರು ಪ್ರೇರಣಾದಾಯಿ ವ್ಯಕ್ತಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ವೇದಿಕೆಯಲ್ಲಿ ವಿರೇಂದ್ರ ಹೆಗ್ಗಡೆ ಯವರನ್ನು ಸನ್ಮಾನಿಸಿ, ಅವರಿಂದ ಸನ್ಮಾನ ಸ್ವೀಕರಿಸಲು ನಾನು ವ್ಯಕ್ತಿಗತವಾಗಿ ಸಣ್ಣವನು, ಆದರೆ ದೇಶದ ಜನತೆ ನನ್ನನ್ನು ಪ್ರಧಾನಿಯ ಹುದ್ದೆಯಲ್ಲಿ ಕೂರಿಸಿದ್ದಾರೆ. ದೇಶದ ಜನತೆಯ ಪ್ರತಿನಿಧಿಯಾಗಿ ಸನ್ಮಾನ ಮಾಡಿ, ಸ್ವೀಕರಿಸಲು ಹೆಮ್ಮೆಪಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿಯಾಗದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಅನೇಕ ರಾಜ್ಯಗಳು ಕೌಶಲ್ಯಾಭಿವೃದ್ಧಿ ಪ್ರಾರಂಭಿಸಿದ್ದು, ವಿರೇಂದ್ರ ಹೆಗ್ಗಡೆ ಯವರು ಕೌಶಲ್ಯಾಭಿವೃದ್ಧಿಗೆ ಮಾದರಿಯಾಗಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಗಾನುಕೂಲ, ಪರಿವರ್ತನೆ, ಸಮಾಜದ ಅವಶಕತೆಗೆ ತಕ್ಕಂತೆ ಸೇವೆ ಸಲ್ಲಿಸಿರುವ ನಮ್ಮ ಋಷಿ ಮುನಿ ಪರಂಪರೆಯ ಅನೇಕ ಸಂಸ್ಥೆಗಳಿವೆ. ಅಂತಹ ಸಂಸ್ಥೆಗಳು ಕೋಟಿ ಕೋಟಿ ಜನರಿಗೆ ಪ್ರೇರಣೆ, ವಿಶ್ವದ ವಿದ್ಯಾನಿಲಯಗಳು ಇಂತಹ ಸಂಸ್ಥೆಗಳನ್ನು ಅಧ್ಯಯನ ಮಾಡಬೇಕು. ಆಧ್ಯಾತ್ಮಿಕ ಪರಂಪರೆ ಇವುಗಳನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಅಧ್ಯಯನ ಮಾಡಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದು, ಅನೇಕ ಪಂಡಿತರು ಗ್ರಾಮೀಣ ಭಾಗದವರು ಟೆಕ್ನಾಲಜಿ ಅರಿಯುವುದಿಲ್ಲ ಎನ್ನುತ್ತಿದ್ದರು. ಆದರೆ ಕೌಶಲ್ಯಾಭಿವೃದ್ಧಿ ಮಾಡುವ ಮೂಲಕ ಹೆಗ್ಗಡೆಯವರು ಇದಕ್ಕೆ ಉತ್ತರ ನೀಡಿದ್ದಾರೆ. ಭಾರತದಲ್ಲಿ ನಗದು ರಹಿತ ವಹಿವಾಟು ನಡೆಯುವುದಕ್ಕೆ ಉಪಯೋಗವಾಗುವಂತಹ ದೊಡ್ಡ ಅಭಿಯಾನ ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಚಿನ್ನದ ನಾಣ್ಯ, ತಾಮ್ರದ ನಾಣ್ಯ, ನೋಟು, ಹೀಗೆ ಯುಗ ಯುಗಗಳಿಂದ ನಗದಿನ ರೂಪ ಬದಲಾಗಿದೆ, ಈಗ ಡಿಜಿಟಲ್ ಹಣದ ಕಾಲವಾಗಿದ್ದು, ನಗದು ರಹಿತ ವಹಿವಾಟಿನಿಂದ ಪಾರದರ್ಶಕತೆ ಕಾಪಾಡಲು ಸಾಧ್ಯವಾಗಿದ್ದು ದೇಶದ ಜನತೆ ಹೆಚ್ಚು ಡಿಜಿಟಲ್ ವಹಿವಾಟು ನಡೆಸಬೇಕೆಂದು ಮೋದಿ ಕರೆ ನೀಡಿದ್ದಾರೆ.
ಇದೇ ಕಾರ್ಯಕ್ರಮದ್ಲಲಿ ಧರ್ಮಸ್ಥಳ ಸಂಸ್ಥೆ ಕೈಗೊಂಡಿರುವ ಪರಿಸರ ಸಂರಕ್ಷಣೆ ಅಭಿಯಾನದ ಲೋಗೋ ಉದ್ಘಾಟನೆಗೊಂಡಿದ್ದು, ಕೃಷಿ, ಪರಿಸರದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ನಮ್ಮ ಹಿರಿಯರು ನಮಗೆ ನೀಡಿರುವ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ನಾಶವಾಗದಂತೆ ನೀಡಬೇಕಿದೆ, ಇದಕ್ಕಾಗಿ ಪರಿಸರ ಸಂರಕ್ಷಣೆಯಾಗಬೇಕಿದೆ. 2022ರ ವೇಳೆಗೆ ಕೃಷಿಯಲ್ಲಿ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿದರೆ ಫಸಲು ಹೆಚ್ಚುತ್ತದೆ. ಭೂಮಿಯ ಸತ್ವವೂ ಉಳಿಯುತ್ತದೆ, ಆದ್ದರಿಂದ ರೈತರು ಯೂರಿಯಾ ಬಳಕೆ ಕಡಿಮೆ ಮಾಡಲು ಸಂಕಲ್ಪ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಸಮುದ್ರ ಕಳೆ ಗಿಡ ಬೆಳೆಸಿ: ಮಂಗಳೂರು ಸಮುದ್ರ ಕಿನಾರೆಯ ಮೀನುಗಾರರು ಸಮುದ್ರ ಕಳೆ ಗಿಡ ಬೆಳೆಸಬೇಕಿದ್ದು, ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಒಂದು ಬುಟ್ಟಿಯಲ್ಲಿ ಬೇರು ಹಾಕಿ ನೀರಿನಲ್ಲಿ 45 ದಿನದಲ್ಲಿ ಬೆಳೆದು ಫಸಲು ಬರುತ್ತದೆ. ಅದನ್ನು ತಂದು ಕೃಷಿಗೆ ಗೊಬ್ಬರ ರೂಪದಲ್ಲಿ ಬಳಸಿದರೆ ಅದರ ಜಿನುಗುವ ನೀರಿನಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದನ್ನು ಸರಕಾರದ ಮುಂದೆ ಇಡಲಿಲ್ಲ. ಅಲ್ಲಿ ಹೇಳಿದರೆ ಹಲವು ನೆಪ ಹೇಳುತ್ತಾರೆ. ಧರ್ಮಸ್ಥಳದ ಮೇಲಿನ ನಂಬಿಕೆಯಿಂದ ಇಲ್ಲಿ ಹೇಳಿದ್ದು, ಈ ಪ್ರಯೋಗ ಮಾಡಿ ಎಂದು ಡಾ.ಹೆಗ್ಗಡೆ ಅವರಿಗೆ ಮೋದಿ ಸಲಹೆ ಮಾಡಿದರು.
‘ತುಳುಗೆ ಪ್ರಾದೇಶಿಕ ಭಾಷೆ ಮಾನ್ಯತೆ ನೀಡಿ’: ಪ್ರಧಾನಿ ಮೋದಿಗೆ ಡಾ.ವಿರೇಂದ್ರ ಹೆಗ್ಗಡೆ ಮನವಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ತುಳುವಿನಲ್ಲೇ ಸ್ವಾಗತಿಸಿದರು. “ಇರೆಗ್ ಯಂಕಲ್‌ನ ಸ್ವಾಗತ… ಎಂದ ಡಾ.ಹೆಗ್ಗಡೆ, ತುಳು ಭಾಷೆಗೆ ಇತರ ಪ್ರಾದೇಶಿಕ ಭಾಷೆಗಳ ರೀತಿ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದರು.
“ಸನ್ಮಾನ್ಯ ಪ್ರಧಾನ ಮಂತ್ರಿಲೆ, ಎಂಕ್ಲೆನ ತುಳುನಾಡ್ ದ ಬೊಕ್ಕ ಮಾತ ತುಳು ಬಂಧುಲೆನ ಪರವಾದ್ ಸೊಲ್ಮೆಲು. ಈರೆಗ್ ಸ್ವಾಗತ.. (ಸನ್ಮಾನ್ಯ ಪ್ರಧಾನಿ ಮಂತ್ರಿಯವರೆ, ತುಳುನಾಡು ಮತ್ತು ತುಳು ಜನತೆಯ ಪರವಾಗಿ ತಮಗೆ ಆತ್ಮೀಯ ಸ್ವಾಗತ ಮತ್ತು ಅಭಿನಂದನೆಗಳು). ನಮ್ಮ ಮಾತೃಭಾಷೆ ತುಳು. ಈ ಭಾಷೆಗೆ ಇನ್ನೂ ದೇಶದ ಇತರ ಭಾಷೆಗಳಂತೆ ನ್ಯಾಯವಾಗಿ ಸಲ್ಲಬೇಕಾದ ಮಾನ್ಯತೆ ದೊರೆತಿಲ್ಲ. ನಾವು ತುಳುವರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡುತ್ತಿದ್ದೇವೆ. ಈ ಮೊದಲು ಹೊಸದಿಲ್ಲಿಯಲ್ಲಿ ತಮ್ಮನ್ನು ಭೇಟಿ ಮಾಡಿದಾಗ ಈ ಕುರಿತು ಜ್ಞಾಪನಾಪತ್ರವೊಂದನ್ನು ನೀಡಿದ್ದೆ’ ಎಂದು ಡಾ. ಹೆಗ್ಗಡೆಯವರು ಪ್ರಧಾನಿಯವರನ್ನು ಸ್ವಾಗತಿಸುತ್ತ ಹೇಳಿದರು.
ತಾವು ಸರ್ಕಾರವನ್ನು ಜನರ ಹತ್ತಿರ ತಂದಿದ್ದೀರಿ. ಇಡೀ ದೇಶಕ್ಕೆ ಇಂದು ಒಂದು ಎಂಬ ಭಾವನೆ ಮೂಡಿದೆ. ಮೂರು ವರ್ಷಗಳಲ್ಲಿ ನಾನು ಬಹಳಷ್ಟು ಬದಲಾವಣೆಗಳನ್ನು ಗಮನಿಸಿದ್ದೇನೆ. ನೀವೊಂದು ‘ಜಾಗೃತ ಭಾರತ’ವನ್ನು ನಿರ್ಮಿಸಿದ್ದೀರಿ. ನಿಮ್ಮಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಂಬಂಧ ಸುಧಾರಣೆಯಾಗಿದೆ. ಧರ್ಮಸ್ಥಳ ಕ್ಷೇತ್ರ ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಸೌಹಾರ್ದ ವಾತಾವರಣ ನಿರ್ಮಿಸಿದೆ. ದೇವಸ್ಥಾನದ ಮೂಲಕ ಜನತೆಗೆ ಅನ್ನದಾನ, ಔಷಧದಾನ, ವಿದ್ಯಾದಾನ ಮತ್ತು ಮುಖ್ಯವಾಗಿ ಅಭಯದಾನ ನೀಡಲಾಗುತ್ತಿದೆ. ಅಭಯದಾನ ಮೂಲಕ ಮೌಲ್ಯಯುತ ಶಿಕ್ಷಣ ಕೊಡಲಾಗುತ್ತಿದೆ. ಎಸ್ ಕೆಆರ್ ಡಿಪಿ ಮೂಲಕ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕೊನೆಯಲ್ಲಿ ನಮ್ಮ ಸಣ್ಣ ಗ್ರಾಮಕ್ಕೆ ಬಂದ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಹೇಳಿ ಹೆಗ್ಗಡೆ ಅವರು ಹೇಳಿದರು.
ಇದಕ್ಕೂ ಮೊದಲು ಧರ್ಮಸ್ಥಳಕ್ಕೆ ಬಂದ ಪ್ರಧಾನಿ ಮೋದಿ ಅವರನ್ನು ವಿರೇಂದ್ರ ಹೆಗ್ಗಡೆ ಅವರು ಸನ್ಮಾನಿಸಿದರು, ಪ್ರಧಾನಿ ಮೋದಿ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಂಬಳದಲ್ಲಿ ಕೋಣಗಳಿಗೆ ಕಟ್ಟುವ ನೊಗದ ಆಕೃತಿಯ ಸ್ಮರಣಿಕೆಯನ್ನು ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು.
ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಡಿ.ವಿ.ಸದಾನಂದ ಗೌಡ, ರಾಸಾಯನಿಕ, ರಸಗೊಬ್ಬರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಸಂಸದರಾದ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ವಸಂತ ಬಂಗೇರ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ ಸ್ವಾಗತಿಸಿದರು. ಡಾ.ಯಶೋವರ್ಮ ಕಾರ್ಯಕ್ರಮ ನಿರೂಪಿಸಿದರು.