ಧಾರ್ಮಿಕ ವಿಚಾರವನ್ನು ಚುನಾವಣೆಯ ಜೊತೆಗೆ ಬೆರೆಸುವುದು ಸರಿಯಲ್ಲ – ಕೆ. ಜಯಪ್ರಕಾಶ ಹೆಗ್ಡೆ
ಕುಂದಾಪುರ: ಕೇವಲ ದೇವರ ಹೆಸರಲ್ಲಿ ಮತ ಕೇಳುವುದಲ್ಲ. ದೇವಸ್ಥಾನದ ಬಗ್ಗೆ ನಾವೇನು ಮಾಡಿದ್ದೇವೆ ಎನ್ನುವುದು ಬಹಳ ಮುಖ್ಯ. ದೇವಸ್ಥಾನ, ಧಾರ್ಮಿಕ ಭಾವನೆಯನ್ನು ಚುನಾವಣೆಯ ಜೊತೆಗೆ ಬೆರೆಸಬಾರದು. ನಾವು ಕೂಡ ದೇವಸ್ಥಾನವನ್ನು ಕಟ್ಟಿದ್ದೇವೆ. ಆದರೆ ಇವ್ಯಾವುದನ್ನು ಹೇಳಿಕೊಳ್ಳಲ್ಲ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಬಹಿರಂಗ ಪ್ರಚಾರ ಸಭೆಯ ಕೊನೆಯ ದಿನವಾದ ಬುಧವಾರ ಸಂಜೆ ನಗರದ ಪ್ರಮುಖ ರಸ್ತೆಯಲ್ಲಿ ರ್ಯಾಲಿ ನಡೆಸಿದ ಬಳಿಕ ತಾಲೂಕು ಪಂಚಾಯತ್ ಎದುರು ಕಾರ್ಯಕರ್ತರನ್ನುದ್ದೇಶಿಸಿಸಿ ಅವರು ಮಾತನಾಡಿದರು
ಬ್ಯಾಲೆಟ್ ಪೇಪರ್ ಅಲ್ಲಿ ಯಾರ ಹೆಸರು ಇದೆಯೋ ಅವರು ಮಾತ್ರ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು. ನಾಯಕರ ಹೆಸರು ಬ್ಯಾಲೆಟ್ ಪೇಪರ್ ಅಲ್ಲಿ ಬರೋದಿಲ್ಲ. ಅದನ್ನು ಜನರಿಗೆ ತಿಳಿಸಿ. ನಾಯಕರ ಹೆಸರಲ್ಲಿ ಮತ ಕೇಳಿ ಗೆದ್ದು ಹೋದಾಗ ಅಭಿವೃದ್ದಿ ಕೆಲಸ ಆಗೋದಿಲ್ಲ. ನಾಯಕರ ಹೆಸರಲ್ಲಿ ಮತ ಕೇಳಿ ಗೆದ್ದು ಹೋಗಿದ್ದರಿಂದ ಕಳೆದ ಹತ್ತು ವರ್ಷಗಳಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ. ನಾವೇನು ಮಾಡಿದರೂ ಜನ ಮತ್ತೆ ನಮ್ಮನ್ನು ಗೆಲ್ಲಿಸುತ್ತಾರೆ ಎನ್ನುವ ಭ್ರಮೆ ಅವರದ್ದು. ಆದರೆ ನಾನು ಹಾಗಲ್ಲ, ಜನರೊಂದಿಗಿದ್ದು ಜನರ ಕೆಲಸ ಮಾಡಿ ಮುಂದಿನ ಚುನಾವಣೆಗೆ ಹೋಗುವಾಗ ಏನೆಲ್ಲಾ ಕೆಲಸ ಮಾಡಿದ್ದೇವೆ ಎಂದು ಲೆಕ್ಕ ಕೊಡುತ್ತೇವೆ. ಅಭಿವೃದ್ದಿ ಕೆಲಸ ಮಾಡಿದಾಗ ಮತ ಸಿಗದೇ ಇರಬಹುದು. ಆದರೆ ಮಾಡಿದ ಕೆಲಸಕ್ಕೆ ತೃಪ್ತಿ ಇದೆಯಲ್ಲಾ ಅದು ಶಾಶ್ವತ ಎಂದರು.
ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಮ್ ಸುಕುಮಾರ್ ಶೆಟ್ಟಿ ಮಾತನಾಡಿದರು.
ಮುಖಂಡರಾದ ಗಫೂರ್, ಜಿ.ಎ ಬಾವಾ, ದಿನೇಶ್ ಹೆಗ್ಡೆ ಮೊಳಹಳ್ಳಿ, ವಿಕಾಸ್ ಹೆಗ್ಡೆ, ದೇವಾನಂದ ಶೆಟ್ಟಿ, ಹರಿಪ್ರಸಾದ್ ಕಾನ್ಮಕ್ಕಿ, ಶಂಕರ್ ಕುಂದರ್ ಮೊದಲಾದವರು ಇದ್ದರು.