‘ಧ್ವನಿ ಶ್ರೀರಂಗ’ ಅಂತಾರಾಷ್ತ್ರೀಯ ರಂಗ ಪ್ರಶಸ್ತಿ ಹಾಗು ‘ಧ್ವನಿ ಪುರಸ್ಕಾರ’ ಪ್ರಶಸ್ತಿ ಪ್ರದಾನ

Spread the love

‘ಧ್ವನಿ ಶ್ರೀರಂಗ’ ಅಂತಾರಾಷ್ತ್ರೀಯ ರಂಗ ಪ್ರಶಸ್ತಿ ಹಾಗು ‘ಧ್ವನಿ ಪುರಸ್ಕಾರ’ ಪ್ರಶಸ್ತಿ ಪ್ರದಾನ

ದುಬೈ: ಮುಂಬೈ ಯಲ್ಲಿ ಜನ್ಮ ತಾಳಿ ಅಂತ್ರಾಷ್ಟ್ರೀಯ ಖ್ಯಾತಿಯ ಕನ್ನಡ ಸಾಹಿತ್ಯ,ಸಾಂಸ್ಕೃತಿಕ ಹಾಗು ಹವ್ಯಾಸಿ ರಂಗ ತಂಡ ಧ್ವನಿ ಪ್ರತಿಷ್ಠಾನಕ್ಕೆ ಈಗ 32 ರ ಹರೆಯ. ಇತ್ತೀಚಿಗೆ ಇದು ತನ್ನ ವಾರ್ಷಿಕೋತ್ಸವವನ್ನು ದುಬೈಯ ಎಮಿರೇಟ್ಸ್ ಥಿಯೇಟರ್ ನಲ್ಲಿ ಶುಕ್ರವಾರ, ದಿನಾಂಕ 19 ಜನವರಿ 2018ರಂದು ಆಚರಿಸಿಕೊಂಡಿತು.

ಈ ಸಂದರ್ಭದಲ್ಲಿ ಧ್ವನಿ ಪ್ರತಿಷ್ಠಾನ ಪ್ರತಿವರ್ಷ ನೀಡುವ “ಧ್ವನಿ ಶ್ರೀರಂಗ “ಅಂತಾರಾಷ್ಟ್ರಿಯ ರಂಗ ಪ್ರಶಸ್ತಿಯನ್ನು ಖ್ಯಾತ ರಂಗ ಭೂಮಿ ಕಲಾವಿದೆ ಚಲನಚಿತ್ರ ನಟಿ ಶ್ರೀಮತಿ ಗಿರಿಜಾ ಲೋಕೇಶ್ ಇವರು ರಂಗಭೂಮಿ ಹಾಗು ಚಲನಚಿತ್ರ ಕ್ಷೇತ್ರಕ್ಕೆ ಕೊಟ್ಟ ಗಣನೀಯ ಸೇವೆಗಾಗಿ ಇವರಿಗೆ ಪ್ರದಾನ ಮಾಡಲಾಯಿತು ಹಾಗು “ಧ್ವನಿ ಪುರಸ್ಕಾರ” ಅಂತರಾಷ್ಟ್ರಿಯ ಪ್ರಶಸ್ತಿಯನ್ನು ಯು ಎ ಈ ಯಲ್ಲಿ ಕನ್ನಡದ ಭಾಷೆ, ಕಲೆ ,ಸಂಸ್ಕೃತಿಯ ಉಳಿವು ಉನ್ನತಿಗಾಗಿ ಶ್ರಮಿಸಿದ ಶ್ರೀಯುತ ಗಣೇಶ್ ರೈ ಇವರಿಗೆ ನೀಡಲಾಯಿತು.

ಆಗಮಿಸಿದ ಅತಿಥಿಗಳನ್ನು ಪೂರ್ಣ ಕುಂಭ ಕಲಶ ಗಳಿಂದ ಸುಮಂಗಲೆಯರು ಸ್ವಾಗತಿಸಿ ಧ್ವನಿ ಪ್ರತಿಷ್ಠಾನದ ಅಧ್ಯಕ್ಷರು ಹಾಗು ಸದಸ್ಯರು ವೇದಿಕೆಗೆ ಬರಮಾಡಿಕೊಂಡರು. ಸಾಯಿ ಮಲ್ಲಿಕಾ ರ ಹಚ್ಚೇವು ಕನ್ನಡದ ದೀಪ ದೊಂದಿಗೆ ವೇದಿಕೆಯಲ್ಲಿದ್ದ ಅತಿಥಿಗಳಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ರಾವ್ ಪಯ್ಯಾರ್ ಅವರು ಎಲ್ಲರನ್ನು ಸ್ವಾಗತಿಸಿ ವೇದಿಕೆಯಲ್ಲಿದ್ದಗಣ್ಯರನ್ನು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಸಭೆಗೆ ಇನ್ನೂ ಹೆಚ್ಚಿನ ಮೆರುಗು ಕೊಟ್ಟ ,ಚಲನಚಿತ್ರ ನಟಿ ರಂಗಭೂಮಿ ಕಲಾವಿದೆ ಶ್ರೀಮತಿ ಗಿರಿಜಾ ಲೋಕೇಶ್ ಧ್ವನಿ ಪ್ರತಿಷ್ಠಾನದ ಹೆಮ್ಮೆಯ ಪ್ರಶಸ್ತಿ “ಧ್ವನಿ ಶ್ರೀರಂಗ” ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ ಸ್ವೀಕರಿಸಿ “ಅಂತಾರಾಷ್ಟ್ರೀಯ ಮಟ್ಟ ದಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿ ಪಡೆದ ಘಳಿಗೆ ಹೆಮ್ಮೆಯೆನಿಸುತ್ತಿದೆ. ಈ ನೆಲದಲ್ಲಿ ಕನ್ನಡ ಕಂಪು ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ!ಧ್ವನಿ ಪ್ರತಿಷ್ಠಾನದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಇದೇ ವೇಳೆ “ಧ್ವನಿ ಪುರಸ್ಕಾರ” ಅಂತಾರಾಷ್ಟ್ರಿಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಯುತ ಗಣೇಶ್ ರೈ ಯವರು ತಾವು ಯು ಎ ಈ ಯಲ್ಲಿ ಬೆಳೆದು ಬಂದ ಹಾದಿ ಧ್ವನಿಯೊಂದಿಗಿನ ಬಾಂಧವ್ಯ ನೆನೆದು ಆತ್ಮೀಯ ಗೆಳೆಯನಿಂದ ಪ್ರಶಸ್ತಿ ಪಡೆದುದು ಹೆಮ್ಮೆಯಿದೆ. ತಮ್ಮ ಕೆಲಸಕ್ಕೆ ಸಂದ ಗೌರವವೆಂದು ಹೇಳಿದರು “ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ಜೋಸೆಫ್ ಮತಾಯಿಸ್, ಶ್ರೀರಾಮಚಂದ್ರ ಹೆಗಡೆ , ಹರೀಶ್ ಶೇರಿಗಾರ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿದ ಗಣ್ಯರನ್ನು ಸ್ಮರಣಿಕೆ ನೀಡಿ ಆದರಿಸಲಾಯಿತು.

ರಜನಿ ಭಟ್ ಅವರ ಸುಂದರ ನಿರೂಪಣೆಯ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಹೆಗಡೆ ವಂದಾನಾರ್ಪಣೆ ಮಾಡಿದರು.

“ಧ್ವನಿ” ಪ್ರತಿಷ್ಠಾನದ ಹೆಮ್ಮೆಯ ನಾಟಕ “ಸ್ವಪ್ನ ವಾಸವದತ್ತೆ ” ಯಶಸ್ವೀ ಪ್ರದರ್ಶನ

“ಧ್ವನಿ ಶ್ರೀರಂಗ” ಅಂತಾರಾಷ್ತ್ರೀಯ ರಂಗ ಪ್ರಶಸ್ತಿ ಹಾಗು “ಧ್ವನಿ ಪುರಸ್ಕಾರ”ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಎಲ್ಲರು ನಿರೀಕ್ಷೆಯಿಂದ ಕಾದಿದ್ದ ನಾಟಕ “ಸ್ವಪ್ನ ವಾಸವದತ್ತೆ” ಪ್ರದರ್ಶನಗೊಂಡಿತು. ಖ್ಯಾತ ಸಂಸ್ಕೃತ ಮಹಾಕವಿ ಭಾಸ ವಿರಚಿತ ಡಾ. ಕೀರ್ತಿನಾಥ್ ಕುರ್ತುಕೋಟಿ ಕನ್ನಡಕ್ಕೆ ಭಾಷಾಂತರಿಸಿದ್ದು ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ರಾವ್ ಪಯ್ಯಾರರು ನಿರ್ದೇಶಿಸಿ ರಂಗದಲ್ಲಿ ಪ್ರದರ್ಶಿಸುವಂತೆ ಮಾಡಿದರು. ಪಯ್ಯಾರರ ಕನಸಿನ ಕೂಸಾದ ಧ್ವನಿ ಯಲ್ಲಿ ಈ ಹಿಂದೆಯೂ ಹಲವು ನಾಟಕಗಳು ಅವರ ನಿರ್ದೇಶನದಲ್ಲಿ ರಂಗವೇರಿ ಯಶಸ್ವಿ ನಾಟಕಗಳ ಸಾಲಿಗೆ ಸೇರಿದ್ದವು. ಉದ್ಯೋಗ ನಿಮಿತ್ತ ತಾಯ್ನಾಡನ್ನು ಬಿಟ್ಟು ಈ ನೆಲದಲ್ಲಿದ್ದು ರಂಗದಲ್ಲಿ ಯಾವುದೇ ಅನುಭವವಿರದ ವ್ಯಕ್ತಿಗಳನ್ನು ಸಹ ಇವರು ಉತ್ತಮ ಕಲಾವಿದರಾಗಿ ರೂಪುಗೊಳಿಸಿರುವುದು ಇವರ ಕೈಚಳಕ.

ತಮ್ಮ ಕೆಲಸ ಬಿಟ್ಟು ರಾತ್ರೆ 12 ರ ತನಕ ನಿದ್ದೆ ಆಹಾರ ಮನೆ ಮಕ್ಕಳು ಎಲ್ಲವನ್ನು ಮರೆತು ಅಭ್ಯಾಸ ನಿರತತೆಯಲ್ಲಿಮುಳುಗಿ ಮಿಂದೆದ್ದು ಬಂದದ್ದು ನಾಟಕ ರಂಗದಲ್ಲಿ ಕಾಣಬಹುದಿತ್ತು. ಅತ್ತ್ಯುತ್ತಮ ನಟನೆ, ಪರಿಧಿ ಮೀರದ ಸಂಭಾಷಣೆ ಮೆರುಗು, ಕಿವಿಗಡಚಿಕ್ಕದ ಸಂಗೀತದ ಅಳವಡಿಕೆ, ರಂಗದ ನಡೆ, ಉತ್ತಮವಾದ ಹಾಡುಗಳ ಜೋಡಣೆ, ಕಣ್ಣಿಗೆ ತಂಪಾಗಿಸುವ ಸೌಮ್ಯ ಬಣ್ಣಗಳ ಧಿರಿಸುಗಳು, ಎಲ್ಲವು ಒಂದಕ್ಕೊ೦ದು ಮಿಗಿಲಾಗಿದ್ದು ನಾಟಕದ “ಅತ್ಯುನ್ನತ” ಯಶಸ್ಸಿಗೆ ಕಾರಣವಾಗಿ ಯಶಸ್ವೀ ನಾಟಕವೆನಿಸಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣ ಕೊನೆಯವರೆಗೂ ನಾಟಕದ ಸವಿಯನ್ನು ಮೆಲ್ಲುತ್ತಿದ್ದದು ದುಬೈಯಲ್ಲಿಯೂ ನಾಟಕದ ಪ್ರೀತಿಗೆ ಕೊರತೆ ಇಲ್ಲ ಎಂಬುದನ್ನು ಸಾಬೀತು ಪಡಿಸಿತು . ನಡು ನಡುವೆ ಸೇರಿಸಿದ ಯಕ್ಷಗಾನದ ನಡೆ ನಾಟಕಕ್ಕೆ ಅಂದವನ್ನು ಹೆಚ್ಚಿಸಿತು ಹಾಗು ನಿರ್ದೇಶಕರ “ವಿಭಿನ್ನತೆ”ಯನ್ನು ಎತ್ತಿ ಹಿಡಿಯಿತು.

ಈ ಯಶಸ್ವಿ ನಾಟಕದ ಹಿಂದೆ ಕಲಾವಿದರಾಗಿ ವಿಧುಷಿ ಸಪ್ನಾ ಕಿರಣ್, ಪ್ರಭಾಕರ ಕಾಮತ್, ಆರತಿ ಅಡಿಗ, ವಾಸು ಬಾಯರ್, ಗುರುರಾಜ್ ಪುತ್ತೂರು,ಅಶೋಕ್ ಅಂಚನ್, ಶ್ವೇತಾ ನಾಡಿಗ್ ಶರ್ಮ, ಸತೀಶ್ ಹೆಗ್ಡೆ, ಸಂತೋಷ್ ಪೂಜಾರಿ, ಜನೆಟ್ ಸಿಕ್ವೆರಾ, ಶೋಭಿತ ಪ್ರೇಂಜಿತ್ ,ಶ್ರೀಲೇಖಾ ಅನಂತ್, ನಾಗಭೂಷಣ್ ಕಶ್ಯಪ್,ಸಂಧ್ಯಾ ರವಿಕುಮಾರ್, ಜಯಂತ್ ಶೆಟ್ಟಿ,ಸಂದೀಪ್ ದೇವಾಡಿಗ,ಜೇಶ್ ಬಾಯರ್, ಮತ್ತಿತರರು ಯಕ್ಷಗಾನದ ಹೆಜ್ಜೆಯಲ್ಲಿ ವಿನಾಯಕ ಹೆಗ್ಡೆ, ನೃತ್ಯದಲ್ಲಿ ದನಿಯಾದವರು ದೀಪ ಮಾರಿಯ, ಸಂಧ್ಯಾ ರವಿಕುಮಾರ್, ಗಾಯನದಲ್ಲಿ ಉದಯ್ ನಂಜಪ್ಪ, ಸಾಯಿಮಲ್ಲಿಕ ಸಹಕರಿಸಿದರು. ತಬಲಾ ಸಾಥ್ ನೀಡಿದವರು ರಾಜೇಶ್ ಕುತ್ತಾರ್. ವಿಶ್ವೇಶ್ವರ ಅಡಿಗ, ರಾಕೇಶ್ ಶರ್ಮ ,ಸ್ಮಿತಾ ಕಾಮತ್ ಸಹಯೋಗ ನೀಡಿದರು. ಪದ್ಮರಾಜ ಎಕ್ಕಾರು, ಅಶೋಕ್ ಬೈಲೂರ್, ಅರುಣ್ ಕುಮಾರ್, ಚಂದ್ರಿಕಾ ಪೂಜಾರಿ ಹಾಗು ಇನ್ನಿತರರು ಪರದೆಯ ಹಿಂದೆ ಸಹಕಾರ ನೀಡಿ ಯಶಸ್ಸಿಗೆ ಕಾರಣರಾದರು.

ವರದಿ : – ಸ್ಮಿತಾ ಕಜೆ, ದುಬೈ

Photo Album


Spread the love