ನ. 23-26 ಅಖಿಲ ಭಾರತ ಅಂತರ್ ವಿವಿ ಕಬಡ್ಡಿ ಪಂದ್ಯಾವಳಿ
ಉಡುಪಿ: ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನವೆಂಬರ್ 23 ರಿಂದ 26 ರ ವರೆಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಪಂದ್ಯಾವಳಿ 2023-24 ನಡೆಯಲಿದೆ ಎಂದು ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ| ಜಿ ಎಸ್ ಚಂದ್ರಶೇಖರ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ಪಿಪಿಸಿಯಲ್ಲಿ ಈಗಾಗಲೇ ಅಖಿಲ ಭಾರತ ಮಟ್ಟದ ನೆಟ್ ಬಾಲ್, ಕಬಡ್ಡಿ, ಪುರುಷರ ವಾಲಿಬಾಲ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರೀಯ ಶ್ರೀಪಾದರು, ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಇದೀಗ ಮತ್ತೊಮ್ಮೆ ಅಖಿಲ ಭಾರತ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸಲಿದ್ದೇವೆ ಎಂದರು.
ನ. 23 ರ ಬೆಳಿಗ್ಗೆ 7ಕ್ಕೆ ಶ್ರೀ ಈಶಪ್ರೀಯತೀರ್ಥ ಸ್ವಾಮೀಜಿಯವರು ಭೂಮಿ ಪೂಜೆ ನೆರವೇರಿಸಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಮಂಗಳೂರು ವಿವಿ ಕುಲಪತಿ ಪ್ರೋ| ಜಯರಾಜ್ ಅಮೀನ್ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಲಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತ ಭಾರತದ ಕಬಡ್ಡಿ ತಂಡದ ಮಾಜಿ ನಾಯಕ ರಾಕೇಶ್ ಕುಮಾರ್ ಮುಖ್ಯ ಅತಿಥಿಯಾಗಿದ್ದಾರೆ.
ನ. 25 ರಂದು ಸಂಜೆ 6 ಗಂಟೆಗೆ ಪ್ರಜ್ಞಾ ಗೌರವ ಸಮಾರಂಭ ನಡೆಯಲಿದ್ದು, ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆಗೈದ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ನ. 26ರಂದು ಸಂಜೆ 6 ಗಂಟೆಗೆ ಸಮಾರೋಪ ನಡೆಯಲಿದೆ. ವಿಧಾನಸಭೆ ಸಭಾಪತಿ ಯು ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಹೇಳಿದರು.
4 ವಲಯಗಳ ತಲಾ 4 ತಂಡಗಳ 16 ತಂಡಗಳ ಸುಮಾರು 320 ಕ್ರೀಡಾಳುಗಳು, 50 ಮಂದಿ ತರಬೇತುದಾರರು, 50 ಮಂದಿ ತೀರ್ಪುಗಾರರು ಆಗಮಿಸಲಿದ್ದಾರೆ. ಒಟ್ಟು 32 ಪಂದ್ಯಗಳು ನಡೆಯಲಿದ್ದು, ವಿಜೇತರಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಯಾವುದೇ ರೀತಿಯ ನಗದು ಬಹುಮಾನ ಇರುವುದಿಲ್ಲ ಎಂದರು.
ಪ್ರೊ ಕಬಡ್ಡಿ ಮಾದರಿಯಲ್ಲೇ ಪಂದ್ಯಾಟ ನಡೆಲಿದ್ದು ಪ್ರೊ ಕಬಡ್ಡಿ ಆಟಗಾರರಾದ ಸೌರಭ್ ಮಂಡಲ್, ಇಮಾಂಶು ಅಮನ್, ಮೊದಲಾದವರು ವಿವಿಧ ವಿವಿ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಮಂಗಳೂರು ವಿವಿಯ ತಂಡವೂ ಭಾಗವಹಿಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ, ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಕುಮಾರ್ ಉಪಸ್ಥಿತರಿದ್ದರು.