ನ 23: ವಿಶ್ವ ಕೊಂಕಣಿ ಕೇಂದ್ರದಿಂದ  ವಿಶ್ವ ಕೊಂಕಣಿ ಪುರಸ್ಕಾರ-2019

Spread the love

ನ 23: ವಿಶ್ವ ಕೊಂಕಣಿ ಕೇಂದ್ರದಿಂದ  ವಿಶ್ವ ಕೊಂಕಣಿ ಪುರಸ್ಕಾರ-2019

ಜಗದ್ವಿಖ್ಯಾತ ಮಣಿಪಾಲ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಶ್ರೀ ಟಿ. ವಿ. ಮೋಹನದಾಸ ಪೈಯವರು ಪ್ರಾಯೋಜಿಸಿದ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ವರ್ಷಂಪ್ರತಿ ನೀಡಲಾಗುವ ವಿಶ್ವ ಕೊಂಕಣಿ ಪುರಸ್ಕಾರ-2019 ಪ್ರದಾನ ಸಮಾರಂಭವು ದಿ.23-11-2019 ಟಿ.ವಿ.ರಮಣ ಪೈ ಸಭಾಗೃಹದಲ್ಲಿ ಜರುಗಲಿದೆ.

ಹೆಸರಾಂತ ಪದ್ಮಶ್ರೀ ಪುರಸ್ಕøತ ಮುಂಬಯಿಯ ಡಾ.ರಮಾಕಾಂತ ಕೃಷ್ಣಾಜಿ ದೇಶಪಾಂಡೆ, ಡಾ. ಆಸ್ಟಿನ್ ಡಿಸೋಜಾ ಪ್ರಭು, ಚಿಕಾಗೊ, ಶ್ರೀಮತಿ ಪಿ. ಸಬಿತಾ ಸತೀಶ ಪೈ, ಬೆಂಗಳೂರು ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಪ್ರಶಸ್ತಿಯ ಕೃತೃ ಶ್ರೀ ಟಿ. ವಿ. ಮೋಹನದಾಸ ಪೈ ಬೀಜ ಭಾಷಣ ಮಾಡಲಿರುವರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ ಹಾಗೂ ಬೆಂಗಳೂರು ಡಾ. ಪಿ.ದಯಾನಂದ ಪೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.

“ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2019” ಕ್ಕಾಗಿ ಗೋವಾದ ಖ್ಯಾತ ಕೊಂಕಣಿ ಲೇಖಕ ಶ್ರೀ ದೇವಿದಾಸ ಕದಮ್ ಇವರ “ಜಾಣವಯ” ಕಾದಂಬರಿ ಆಯ್ಕೆಗೊಂಡಿದೆ. ಹಾಗೆಯೇ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರ-2019” ಕ್ಕಾಗಿ ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕಿ ಶ್ರೀಮತಿ ಶಕುಂತಲಾ ಆರ್ ಕಿಣಿ ಇವರ “ಥೋಡೇ ಏಕಾಂತ” ಕವಿತಾ ಸಂಗ್ರಹ ಆಯ್ಕೆಗೊಂಡಿದೆ.

ಹಾಗೆಯೇ ಹಿರಿಯ ಖ್ಯಾತ ಕೊಂಕಣಿ ಸಾಹಿತ್ಯಕಾರ, ಸಂಶೋಧಕ ಶ್ರೀ. ರೋಕಿ ವಿ. ಮಿರಾಂದಾ, ಮೈಸೂರು ಇವರಿಗೆ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರ-2019” ಕೊಡಲಾಗುತ್ತದೆ.
“ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸಮಾಜ ಸೇವಾ ಪ್ರಶಸ್ತಿ -2019 ಗಾಗಿ (ಕೊಂಕಣಿ ಪುರುಷರ ವಿಭಾಗದಲ್ಲಿ) ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಯೋಗ ಸಾಧಕ ಮೈಸೂರಿನ ಶ್ರೀ ಕೆ. ರಾಘವೇಂದ್ರ ಪೈ ಇವರಿಗೆ ಕೊಡಲಾಗುತ್ತದೆ.

ಅಲ್ಲದೇ (ಕೊಂಕಣಿ ಮಹಿಳಾ ವಿಭಾಗದಲ್ಲಿ) ಕುಮಟಾದ ಸಮಾಜ ಸೇವಾ ಕಾರ್ಯಕರ್ತೆ ಶ್ರೀಮತಿ ಮೀರಾ ಶ್ರೀನಿವಾಸ ಶ್ಯಾನಭಾಗ ಇವರಿಗೆ “ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸಮಾಜ ಸೇವಾ ಪುರಸ್ಕಾರ-2019” ನೀಡಲಾಗುವುದು.

ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ನ ಮುಖ್ಯಸ್ಥರಾದ ಶ್ರೀ ಟಿ. ವಿ. ಮೋಹನದಾಸ ಪೈ ಯವರು ತಮ್ಮ ಮಾತೋಶ್ರೀಯವರ ಹೆಸರಿನಲ್ಲಿ ಈ ವರ್ಷ ವಿಶೇಷವಾಗಿ ವಿಶ್ವ ಕೊಂಕಣಿ ಕೇಂದ್ರದಿಂದ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ವಿಶೇಷ ಪುರಸ್ಕಾರ” ಘೋಷಿಸಿದ್ದಾರೆ. ಮಂಗಳೂರಿನ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಹಲವು ವರ್ಷಗಳಿಂದ ಸಂಗೀತ ಕಲಾಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಶ್ರೀಮತಿ ವಸಂತಿ ಆರ್ ನಾಯಕ ಇವರಿಗೆ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ವಿಶೇಷ ಪುರಸ್ಕಾರ” ನೀಡಲಾಗುವುದು.

ಮತ್ತು ಗೋವಾ ಸ್ವಾತಂತ್ರ್ಯ ಚಳುವಳಿ ಕಾಲದಿಂದಲೂ ನಿರಂತರವಾಗಿ ಕೊಂಕಣಿ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಪ್ರಸಿದ್ಧರಾದ ಹೆಸರಾಂತ ಸಾಹಿತಿ ಮತ್ತು ಅಂಕಣಕಾರರೂ ಆಗಿರುವ ಗೋವಾದ ಶ್ರೀ ಸುಹಾಸ ಯಶವಂತ ದಲಾಲ್ ಇವರು ಕೂಡಾ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ವಿಶೇಷ ಪುರಸ್ಕಾರ” ಕ್ಕಾಗಿ ಆಯ್ಕೆಯಾಗಿದ್ದಾರೆ.

ವಿಶ್ವ ಕೊಂಕಣಿ ಕೇಂದ್ರದಿಂದ ಕೊಡಲಾಗುವ ಒಟ್ಟು 7 ಪ್ರಶಸ್ತಿಗಳು ತಲಾ ರೂ. 1.00 ಲಕ್ಷ ಮೊತ್ತ, ಶಾಲು, ಸ್ಮರಣಿಕೆ, ಹಾಗೂ ಮಾನಪತ್ರವನ್ನು ಒಳಗೊಂಡಿರುತ್ತವೆ. 2019 ನವೆಂಬರ 23 ರಂದು ಮಂಗಳೂರಿನ ಟಿ. ವಿ. ರಮಣ ಪೈ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.


Spread the love