ನ.27 ರಂದು ಎಲ್ಲೂರು ಕಂಬಳ

Spread the love

ನ.27 ರಂದು ಎಲ್ಲೂರು ಕಂಬಳ

ಬೈಂದೂರು: ಕರಾವಳಿಯ ಜನಪದ ಪ್ರಕಾರಗಳಲ್ಲಿ ಅತ್ಯಂತ ಗೌರವದ ಸ್ಥಾನ ಉಳಿಸಿಕೊಂಡು, ಧಾರ್ಮಿಕ ಹಾಗೂ ಸಾಮಾಜಿಕ ಚೌಕಟ್ಟಿನಲ್ಲಿ ಅನಾವರಣಗೊಳ್ಳುತ್ತಿರುವ ಕಂಬಳ ಮಹೋತ್ಸವಗಳನ್ನು ಉಳಿಸಿ-ಬೆಳೆಸಬೇಕು ಎನ್ನುವ ಸದುದ್ದೇಶದಿಂದ ಇದೇ ನವೆಂಬರ್ 27 ರಂದು ಕೊಲ್ಲೂರು ಸಮೀಪದ ಕುಡೂರಿನಲ್ಲಿ ಎಲ್ಲೂರು ಕಂಬಳ ನಡೆಸಲು ನಿಶ್ಚಯಿಸಲಾಗಿದೆ.

ಎಲ್ಲೂರು ಮನೆತನದ ಯಜಮಾನರಾದ ಶ್ರೀ ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ಇದೇ ಡಿಸೆಂಬರ್ 24 ರಂದು 90 ವರ್ಷ ತುಂಬುತ್ತಿರುವ ಕಾರಣದಿಂದ ಈ ಬಾರಿಯ ಅವರು ಹುಟ್ಟು ಹಬ್ಬವನ್ನು ಸಾರ್ವಜನಿಕ ಭಾಗೀದಾರಿಕೆಯೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಚಿಂತನೆಯಲ್ಲಿ, ಅನೇಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಎಲ್ಲೂರಿನ ಕಂಬಳಕ್ಕೂ ಇನ್ನಷ್ಟು ಹೊಳಪು ನೀಡಲು ಯೋಜನೆ ರೂಪಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಹರಕೆ ಉತ್ಸವವಾಗಿ ನಡೆಯುತ್ತಿರುವ ಎಲ್ಲೂರು ಕಂಬಳವನ್ನು ಇನ್ನಷ್ಟು ವಿಸ್ತಾರಗೊಳಿಸಿ, ಸಾಂಸ್ಕೃತಿಕವಾಗಿ ಇನ್ನಷ್ಟು ಶ್ರೀಮಂತಗೊಳಿಸಬೇಕು ಎನ್ನುವುದು ಸ್ಥಳೀಯ ಕಂಬಳಾಸಕ್ತರ ಹಲವು ವರ್ಷಗಳ ಬೇಡಿಕೆ. ಅವರ ಆಸೆಯ ಕನಸುಗಳು ಈ ಬಾರಿ ನನಸಾಗುವ ಸಮಯ ಕೂಡಿ ಬಂದಿದೆ. ನ.27 ರಂದು ನಡೆಯುವ ಕಂಬಳಕ್ಕಾಗಿ ಬೈಂದೂರು ತಾಲ್ಲೂಕು ಕಂಬಳ ಸಮಿತಿಯವರ ಹಾಗೂ ಸ್ಥಳೀಯ ಕಂಬಳಾಸಕ್ತರ ಸಹಕಾರದಲ್ಲಿ ಸಿದ್ಧತೆಯ ಕಾರ್ಯಗಳು ನಡೆಯುತ್ತಿವೆ.

ಹಗ್ಗ ಅತಿ ಕಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ ಹಾಗೂ ಕನೆ ಹಲಗೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಪ್ರತಿ ವಿಭಾಗದಲ್ಲಿಯೂ ತಲಾ ಮೂರು ಬಹುಮಾನಗಳಿದ್ದು, ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಪ್ರತಿ ವಿಭಾಗದ ಕಂಬಳದ ಆಟಗಾರರನ್ನು ಗೌರವಿಸಲಾಗುವುದು. ಕಂಬಳ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ ಕೋಣಗಳ ಯಜಮಾನರು, ಸಂಘಟಕರು ಹಾಗೂ ಓಟಗಾರರನ್ನು ಸನ್ಮಾನಿಸಲಾಗುವುದು.

ಅಂದಾಜು 50 ಕ್ಕೂ ಮಿಕ್ಕಿ ಕೋಣಗಳ ಜೊತೆ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮಾಜಿ ಶಾಸಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ, ಮೂಡುಬಿದಿರೆಯ ಚೌಟರ ಅರಮನೆಯ ಅರಸರಾದ ಕುಲದೀಪ್ ಎಂ, ಮಾಜಿ ಸಚಿವ ಅಭಯಚಂದ್ರ ಜೈನ್, ಹಿರಿಯ ಕಂಬಳ ಸಂಘಟಕರಾದ ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಬಾರ್ಕೂರು ಶಾಂತಾರಾಮ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಬಿ.ಉದಯ್ಕುಮಾರ ಶೆಟ್ಟಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತಿ ಹೊಂದಲಿದ್ದಾರೆ ಎಂದು ಕಂಬಳದ ಮನೆಯವರಾದ ರಾಮ್ ಕಿಶನ್ ಹೆಗ್ಡೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love