ನ: 4-5 ರಂದು ಉಡುಪಿಯಲ್ಲಿ ರಾಜ್ಯ ಮಟ್ಟದ ವಿಪ್ರ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

Spread the love

ನ: 4-5 ರಂದು ಉಡುಪಿಯಲ್ಲಿ ರಾಜ್ಯ ಮಟ್ಟದ ವಿಪ್ರ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಉಡುಪಿ: ರಾಜ್ಯದ ವಿಪ್ರಬಾಂಧವರಿಗಾಗಿ ನವೆಂಬರ್ 4 ಮತ್ತು 5 ರಂದು ಪ್ರಥಮ ಬಾರಿಗೆ ರಾಜ್ಯಮಟ್ಟದ ಆಯ್ದ ವಿಪ್ರ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರು ಅವರು ಹೇಳಿದರು.

ಅವರು ಸೋಮವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 3 ದಶಕಗಳ ಹಿಂದೆ ಶಿರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮಿಜಿಯವರ ಆಶೀರ್ವಾದದೊಂದಿಗೆ ವಿಪ್ರ ಬಾಂಧವರಿಗಾಗಿ ಸ್ಥಾಪಿಸಲ್ಪಟ್ಟ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅನೇಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು ಪ್ರಥಮಬಾರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯು ಉಡುಪಿ ಮಹಾತ್ಮಗಾಂಧಿ ಬಯಲು ರಂಗ ಮಂದಿರದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಪಂದ್ಯಾವಳಿಯ ಪ್ರಥಮ ಬಹುಮಾನವಾಗಿ ರೂ. 1,11,111/- ಮತ್ತು ದ್ವೀತಿಯ ಬಹುಮಾನವಾಗಿ ರೂ. 55,555/- ಅಲ್ಲದೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಪ್ರತಿ ತಂಡಕ್ಕೂ ವಿಶೇಷ ಬಹುಮಾನ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಟ, ಉತ್ತಮ ಬೌಲರ್, ಉತ್ತಮ ದಾಂಡಿಗ, ಉತ್ತಮ ಕ್ಷೇತ್ರ ರಕ್ಷಕ, ಹೀಗೆ ಅನೇಕ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೆ ಪ್ರತಿ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ದಾಂಡಿಗ ಬಹುಮಾನ ಕೂಡ ನೀಡಲಾಗುತ್ತದೆ ಎಂದರು.

ಪಂದ್ಯವು ನವೆಂಬರ್ 4 ರಂದು ಬೆಳಿಗ್ಗೆ 9 ಗಂಟೆಗೆ ಗಣ್ಯರು, ಕ್ರೀಡಾಭಿಮಾನಿಗಳು, ಕ್ರೀಡಾಳುಗಳ ಸಮ್ಮುಖದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಆಶೀರ್ವಚನ ಮಾಡಲಿರುವರು.

ಬಹುಮಾನ ವಿತರಣೆಯನ್ನು ನವೆಂಬರ್ 5 ರಂದು ಸಂಜೆ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅನೇಕ ಗಣ್ಯರ ಸಮ್ಮುಖ ನೇರವೇರಿಸಲಿದ್ದಾರೆ. ಇದೇ ವೇಳೆ ರಾಜ್ಯ ಮಟ್ಟದ ಇಬ್ಬರು ಕ್ರಿಕೆಟ್ ವಿಪ್ರ ಆಟಗಾರರಿಗೆ ಸನ್ಮಾನಿಸಲಾಗುವುದು ಎಂದರು.

ಭಾಗವಹಿಸಲು ಇಚ್ಚಿಸುವ ತಂಡಗಳು ಪ್ರವೇಶ ಶುಲ್ಕ ರೂ. 8000/-ವನ್ನು ಡಿಡಿ/ಬ್ಯಾಂಕ್ ಟ್ರಾನ್ಸ್ ಫರ್ ಮೂಲಕ ಅಕ್ಟೋಬರ್ 25  ರ ಮೊದಲು ಸಲ್ಲಿಸಬೇಕು.

ಪ್ರತಿ ಪಂದ್ಯಾಟವು ನಿಯಮಿತ 8 ಒವರ್ ಗಳದ್ದಾಗಿರುತ್ತದೆ, ಪಂದ್ಯದ ಮೊದಲ 2 ಒವರ್ ಗಳು ಪವರ್ ಪ್ಲೇ ಆಗಿರುತ್ತದೆ.

ಒಬ್ಬ ಎಸೆತಗಾರನಿಗೆ ಹೆಚ್ಚೆಂದರೆ 2 ಒವರ್ ಗಳು ಮಾತ್ರವಾಗಿದ್ದು, ಪಂದ್ಯದ ವೇಳೆಯನ್ನು ಮುಂಚಿತವಾಗಿ ತಿಳಿಸಲಾಗುವುದು.

ನಿಗದಿತ ಸಮಯಕ್ಕೆ 1 ಗಂಟೆ ಮುಂಚಿತವಾಗಿ ಎಲ್ಲಾ ಆಟಗಾರರು ತಯಾರಿರಬೇಕು, ಪ್ರತೀ ತಂಡದ ಆಟಗಾರರು ಖಡ್ಡಾಯವಾಗಿ ಭಾವಚಿತ್ರವಿರುವ ಗುರುತಿನ ಚೀಟಿ ತರತಕ್ಕದ್ದು. ತಂಡದ ಎಲ್ಲಾ ಆಟಗಾರರು ಏಕರೂಪದ ವಸ್ತ್ರವನ್ನು ಧರಿಸಿರುವುದು ಕಡ್ಡಾಯವಾಗಿರುತ್ತದೆ.

ಒಂದು ಆಟ ಮತ್ತು ಇನ್ನೊಂದರ ಮದ್ಯ ಬಿಡುವಿನ ವೇಳೆಯಲ್ಲಿ ತಂಪುಪಾನಿಯ ಒದಗಿಸಲಾಗುವುದು. ದೂರದ ಊರಿನಿಂದ ಬರುವ ತಂಡಗಳಿಗೆ ಊಟ, ವಸತಿ ಕಲ್ಪಿಸಲಾಗುವುದು. ಭಾಗವಹಿಸುವ ತಂಡವು ತಮ್ಮ ಹೆಸರು, ದೂರವಾಣಿ ಸಂಖ್ಯೆ ನೀಡತಕ್ಕದ್ದು. ಆಟದ ಸಮಯದಲ್ಲಿ ಅಂಪಯರ್ ತೀರ್ಮಾನವೇ ಅಂತಿಮವಾಗಿದ್ದು, ಇತರ ವಿಷಯದಲ್ಲಿ ಸಂಯೋಜಕರ ತೀರ್ಮಾನವೇ ಅಂತಿಮವಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಶಶಿಧರ ಭಟ್, ನ್ಯೂ ಭಾರತೀಶ ಜುವೆಲರ್ಸ್, ನಾನಾಲಾಲ್ ಆರ್ಕೇಡ್, ಬಡಗುಪೇಟೆ, ಉಡುಪಿ. ಮೊಬೈಲ್ 9448911421, ರಾಜೇಶ ಕೊಡಂಚ : 9844425856.

ಸುದ್ದಿಗೋಷ್ಠಿಯಲ್ಲಿ ಯುವ ಬ್ರಾಹ್ಮಣ ಪರಿಷತ್ ಇದರ ಉಪಾಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಪ್ರವೀಣ್ ಉಪಾಧ್ಯ, ಮಾಜಿ ಅಧ್ಯಕ್ಷ ಶಶಿಧರ ಭಟ್, ಉದ್ಯಮಿ ಹಾಗೂ ಪರಿಷತ್ ಪ್ರದಾನ ಸಲಹೆಗಾರರಾದ ರಂಜನ್ ಕಲ್ಕೂರ ಉಪಸ್ಥಿತರಿದ್ದರು.


Spread the love