ನಕಲಿ ಅಂಕಪಟ್ಟಿ ಮಾರಾಟ ಜಾಲ ಪತ್ತೆ ; ಒರ್ವನ ಬಂಧನ
ಮಂಗಳೂರು: ನಗರ ತೊಕ್ಕೊಟ್ಟು ಟಿ.ಸಿ. ರಸ್ತೆಯಲ್ಲಿರುವ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಕಲ್ ಸೈನ್ಸ್ (ಎಂಐಟಿಎಸ್) ಹೆಸರಿನ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಟಿಸಿ ರಸ್ತೆಯ ಹೋಲಿ ಕ್ರಾಸ್ ನಿವಾಸಿ ಗೋಡ್ವಿನ್ ಡಿಸೋಜ (33) ಬಂಧಿತ ಆರೋಪಿ. ಈತ ಅಂಕಪಟ್ಟಿಯನ್ನು ತಯಾರಿಸಿ 10 ಸಾವಿರ ರೂ. ನಿಂದ ರಿಂದ 45 ಸಾವಿರ ರೂ. ವರೆಗೆ ನಕಲಿ ಅಂಕಪಟ್ಟಿ ಹಾಗೂ ಸರ್ಟಫೀಕೇಟ್ಗಳನ್ನು ತಯಾರಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ.
ಈ ಮೂಲಕ ಅಂಕಪಟ್ಟಿಗಳನ್ನು ನಕಲಿಯಾಗಿ ತಯಾರಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಬೃಹತ್ ಜಾಲವನ್ನು ಪತ್ತೆಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಎಂಐಟಿಎಸ್ ಸಂಸ್ಥೆಯ ನೌಕರನಾಗಿದ್ದಾನೆ. ಸಂಸ್ಥೆಯ ಡೈರೆಕ್ಟರ್ ಅಸ್ಕಾನ್ ಶೇಖ್ ಎಂಬಾತ ಈ ಸಂಸ್ಥೆಯನ್ನು ನಡೆಸುತ್ತಿದ್ದು, ಈತ 2016ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಡಿಪ್ಲೊಮಾ ಸೇರಿ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ದಂಧೆ ನಡೆಸುತ್ತಿದ್ದ.
ಈ ಸಂಸ್ಥೆಯ ಪ್ರಿನ್ಸಿಪಾಲ್ ಅಸ್ಕಾರ್ ಶೇಖ್, ಡೈರೆಕ್ಟರ್ ಅಸ್ಕಾನ್ ಶೇಖ್ ಹಾಗೂ ನೌಕರ ಗೋಡ್ವಿನ್ ಡಿಸೋಜ ಜತೆಯಾಗಿ ಸೇರಿ ಈ ಸಂಸ್ಥೆಗೆ ನಕಲಿ ಅಂಕಪಟ್ಟಿಗಾಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಮಾಹಿತಿ ಪಡೆದು ಒಂದು ವಾರದ ಒಳಗಡೆ ಅವರಿಗೆ ಬೇಕಾದ ಪದವಿಗಳ ಅಂಕಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದರು.
ಈ ಸಂಸ್ಥೆಯಿಂದ ಈಗಾಗಲೇ ಸುಮಾರು 150 ಕ್ಕೂ ಹೆಚ್ಚು ಮಂದಿ ವಿವಿಧ ಪದವಿಗಳ ನಕಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಈ ಶಿಕ್ಷಣ ಸಂಸ್ಥೆಯ ಡೈರೆಕ್ಟರ್ ಅಸ್ಕಾನ್ ಶೇಖ್ ಎಂಬಾತ ಈ ಹಿಂದೆ 2016ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್ವೆಲ್ ಬಳಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಜಿನಿಯರಿಂಗ್ ಎಂಬ ಸಂಸ್ಥೆಯಲ್ಲಿ ಎಜುಎಕ್ಸ್ಲ್ ಎಂಬ ಸಂಸ್ಥೆಯನ್ನು ತೆರೆದು ಇದೇ ರೀತಿ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಕೃತ್ಯವನ್ನು ನಡೆಸುತ್ತಿದ್ದ ಸಂದರ್ಭ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿತ್ತು.