ನಕ್ಸಲ್ ಧಾಳಿಗೆ ತುತ್ತಾದ ವೀರ ಯೋಧರಿಗೆ ಕಾಂಗ್ರೆಸ್ ವತಿಯಿಂದ ದೀಪನಮನ
ಉಡುಪಿ: ಛತ್ತೀಸ್ ಘಡದಲ್ಲಿ ನಕ್ಸಲರ ಧಾಳಿಗೆ ತುತ್ತಾಗಿ ವೀರಮರಣವಪ್ಪಿದ ಯೋಧರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಕ್ಲಾಕ್ ಟವರ್ ಬಳಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಮೇಣದ ಬತ್ತಿಯನ್ನು ಹಚ್ಚಿ ಒಂದು ನಿಮಿಷದ ಮೌನಾಚರರಣೆಯ ಮೂಲಕ ಅಗಲಿದ ಯೋಧರಿಗೆ ಶೃದ್ಧಾಂಜಲಿಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಅವರು ನಕ್ಸಲರಿಂದ ದೇಶ ಕಾಯುವ ಯೋಧರ ಹತ್ಯೆ ಅತ್ಯಂತ ನೋವಿನ ವಿಚಾರವಾಗಿದೆ. ರಾತ್ರಿ ಹಗಲೆನ್ನದೆ ದೇಶವನ್ನು ಕಾಯುವ ವೀರ ಯೋಧರು ನಕ್ಸಲರ ಧಾಳಿಗೆ ಬಲಿಯಾಗಿದ್ದು ದೇಶದ ಗುಪ್ತಚರ ವ್ಯವಸ್ಥೆಗೆ ಸವಾಲಾಗಿದೆ. ಸೈನಿಕರ ಹೆಸರನ್ನು ಹೇಳಿ ಅಧಿಕಾರಕ್ಕೆ ಬಂದ 56 ಇಂಚಿನ ಈ ದೇಶದ ಪ್ರಧಾನಿ ನರೆಂದ್ರ ಮೋದಿಯವರ ಮೂರು ವರ್ಷದ ಆಡಳಿತದಲ್ಲಿ ನಿರಂತರವಾಗಿ ಯೋಧರು ಸಾವನಪ್ಪುತ್ತಿದ್ದಾರೆ. ದೇಶದ ಗುಪ್ತಚರ ವ್ಯವಸ್ಥೆಯ ವೈಫಲ್ಯದಿಂದ ಇಂತಹ ಘಟನೆ ನಡೆದಿದೆ ಎಂದರೆ ತಪ್ಪಾಗಲಾರುದು. ಈ ದೇಶವನ್ನು ಕಾಯುವ ಯೋಧರಿಗೆ ರಕ್ಷಣೆ ಇಲ್ಲವೆಂದಾದ ಮೇಲೆ ಸಾಮಾನ್ಯ ಜನರ ಗತಿಯೇನು. ಈ ಘಟನೆಗೆ ನೇರವಾಗಿ ಕೇಂದ್ರ ಸರಕಾರದ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವ್ಯವಸ್ಥೆಯ ಲೋಪವೆ ಕಾರಣವಾಗಿದ್ದು ಇನ್ನಾದರೂ ಕೇಂದ್ರ ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವತ್ತ ಗಮನ ಹರಿಸಬೇಕು ಎಂದರು.
ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ ಜನರಿಗೆ ಅಚ್ಛೆ ದಿನ್ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಸರಕಾರದಲ್ಲಿ ದೇಶದ ಪ್ರಧಾನ ವ್ಯವಸ್ಥೆಯಾದ ಯೋಧರಿಗೆ ರಕ್ಷಣೆ ಇಲ್ಲದೆ ಇರುವುದು ಪ್ರತಿಯೊಬ್ಬರಿಗೂ ಆಂತಕಕ್ಕೆ ಕಾರಣವಾಗಿದೆ. ಈ ಸರಕಾರ ಸೈನಿಕರನ್ನು ನಡೆಸಿಕೊಳ್ಳುತ್ತಿರುವ ಕುರಿತು ಆಗಾಗ್ಗೆ ಚರ್ಚೆಗಳು ನಡೆಯುತ್ತಿದ್ದು ಸೈನಿಕರಿಗೆ ನೀಡುತ್ತಿರುವ ಆಹಾರದ ಬಗ್ಗೆ ದನಿಯೆತ್ತಿದ ಯೋಧ ಅಲ್ಲಿನ ವ್ಯವಸ್ಥೆಯನ್ನು ಬಿಚ್ಚಿಟ್ಟಿರುವುದು ಕಂಡರೆ ನೋವು ತರುತ್ತದೆ. ತಾನು ಅಧಿಕಾರಕ್ಕೆ ಬರುವ ಮೊದಲು ಹೇಳಿದ ಒಂದೇ ಒಂದು ಆಶ್ವಾಸನೆಯನ್ನು ಕೂಡ ಪೋರೈಸದೆ ವಚನ ಭ್ರಷ್ಟರಾಗಿದ್ದಾರೆ. ದೇಶದ ಸೈನಿಕರು ಸುರಕ್ಷಿತರಾಗಿಲ್ಲದೆ ಸಾಮಾನ್ಯ ಜನರು ಕೂಡ ಸುರಕ್ಷಿತರಾಗಿ ಬದುಕಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಕೂಡ ಸೈನಿಕರ ಭದ್ರತೆಯ ಕುರಿತು ಗಮನ ನೀಡಲಿ ಹಾಗೂ ಮೃತ ಯೋಧರು ಅಮರರಾಗಲಿ ಎಂದರು.
ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕಾಂಗ್ರೆಸ್ ನಾಯಕರಾದ ಚಂದ್ರಿಕಾ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಮೃತ್ ಶೆಣೈ, ಜನಾರ್ಧನ ಭಂಡಾರ್ಕರ್, ಹರೀಶ್ ಕಿಣಿ ಅಲೆವೂರು, ಪ್ರಶಾಂತ್ ಪೂಜಾರಿ, ಯತೀಶ್ ಕರ್ಕೆರಾ, ಪ್ರಖ್ಯಾತ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ನೀರಜ್ ಪಾಟೀಲ್, ದಿನೇಶ್ ಪುತ್ರನ್, ರಮೇಶ್ ಕಾಂಚನ್, ನಾರಾಯಣ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.