ನಗದು ರಹಿತ ಗ್ರಾಮವಾಗಿ ಹಳ್ಳಾಡಿ ಶೀಘ್ರದಲ್ಲಿ ಘೋಷಣೆ: ಶೋಭಾ ಕರಂದ್ಲಾಜೆ
ಉಡುಪಿ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಗದುರಹಿತ ಆರ್ಥಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದ್ದು, ಕುಂದಾಪುರ ತಾಲೂಕಿನ ಹಳ್ಳಾಡಿ ಗ್ರಾಮದಲ್ಲಿ ಮೊಬೈಲ್ ಬ್ಯಾಂಕಿಂಗ್ ರಿಜಿಷ್ಟ್ರೇಷನ್ ಮುಗಿದಿದ್ದು, ಶೀಘ್ರದಲ್ಲಿ ಈ ಗ್ರಾಮವನ್ನು ನಗದು ರಹಿತ ವ್ಯವಹಾರ ಗ್ರಾಮವನ್ನಾಗಿ ಘೋಷಿಸಲಾಗುವುದು ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅವರು ಮಂಗಳವಾರ ಉಡುಪಿ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ) ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ 158 ಗ್ರಾಮಗಳಲ್ಲಿ ಪೋಸ್ ಮೆಷಿನ್ ಅಳವಡಿಸಿ ನಗದುರಹಿತ ವ್ಯವಹಾರದ ಗ್ರಾಮಗಳನ್ನಾಗಿ ಮಾಡುವಂತೆ ಎಲ್ಲಾ ಬ್ಯಾಂಕ್ ಗಳಿಗೆ ಸಂಸದರು ನಿದೇರ್ಶನ ನೀಡಿದರು, ಆದರೆ ಪೋಸ್ ಮೆಷಿನ್ ಅಳವಡಿಸುವ ವೆಚ್ಚ ಮತ್ತು ಪ್ರತಿ ವ್ಯವಹಾರಕ್ಕೆ ತಗಲುವ ಸೇವಾ ವೆಚ್ಚವನ್ನು ಪಾವತಿಸುವ ಕುರಿತು ಪಂಚಾಯತ್ ಗಳು ಮತ್ತು ಬ್ಯಾಂಕ್ ಗಳ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ , ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು.
ಪೋಸ್ ಮೆಷಿನ್ ಬದಲು ಮೊಬೈಲ್ ಬ್ಯಾಕಿಂಗ್ ಬಳಕೆಯ ಮೂಲಕ ನಗದುರಹಿತ ವ್ಯವಹಾರ ಕೈಗೊಳ್ಳುವಂತೆ ಸೂಚಿಸಿದ ಸಂಸದರು, ಪ್ರಾರಂಭದಲ್ಲಿ ಪೈಲಟ್ ಯೋಜನೆಯಾಗಿ ಒಂದು ಗ್ರಾಮದಲ್ಲಿ ಈ ವ್ಯವಸ್ಥೆ ಅಳವಡಿಸಿ ನಂತರ ಎಲ್ಲಾ ಗ್ರಾಮಗಳಿಗೆ ವಿಸ್ತರಿಸುವಂತೆ ಸೂಚಿಸದರು. ಎಲ್ಲಾ ಬ್ಯಾಂಕ್ ಗಳು ಒಂದೊಂದು ಗ್ರಾಮಗಳನ್ನು ದತ್ತು ಪಡೆದು ಈ ಯೋಜನೆಯನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.
ಕರೆಂಟ್ ಹೋದ ಸಮಯದಲ್ಲಿ ಬಿ.ಎಸ್.ಎನ್. ಎಲ್ ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಹಲವು ದೂರು ಬರುತ್ತಿವೆ ಈ ಕುರಿತು ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹಾಗೂ ಟವರ್ ಗಳ ನಿರ್ವಹಣೆಗೆ ಸರಬರಾಜಾಗುತ್ತಿರುವ ಡೀಸೆಲ್ ಮಾಹಿತಿಯನ್ನು ನೀಡುವಂತೆ ಹಾಗೂ ರಸ್ತೆ ದುರಸ್ತಿ ಸಂದರ್ಭದಲ್ಲಿ ಹಾಳಾಗಿರುವ ಓಎಫ್ಸಿ ಕೇಬಲ್ ಗಳನ್ನು ಶೀಘ್ರದಲ್ಲಿ ದುರಸ್ತಿಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 216 2ಜಿ ಟವರ್ ಹಾಗೂ 164 3ಜಿ ಟವರ್ ಗಳನ್ನು ಈಗಾಗಲೇ ಅಳವಡಿಸಲಾಗಿದೆ, ಹೆಚ್ಚುವರಿಯಾಗಿ ಇನ್ನೂ 100 ಟವರ್ ಅಳವಡಿಸಿದರೆ ಜಿಲ್ಲೆಯಾದ್ಯಂತ ಸಂಪರ್ಕಕ್ಕೆ ಯಾವುದೇ ಅಡ್ಡಿ ಇಲ್ಲ , ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಬಿ.ಎಸ್.ಎನ್.ಎಲ್ ಅಧಿಕಾರಿಗಳು ತಿಳಿಸಿದರು.
ಕೇಂದ್ರೀಯ ವಿದ್ಯಾಲಯಕ್ಕೆ ಈಗಾಗಲೇ ಗುರ್ತಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಮಸ್ಯೆಯಿದ್ದಲ್ಲಿ ಶೀಘ್ರದಲ್ಲಿ ಬೇರೊಂದು ಜಾಗವನ್ನು ಗುರಿತಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಸಂಸದರು, ಜಿಲ್ಲೆಯಲ್ಲಿ ಅಗತ್ಯ ಸ್ಥಳಾವಕಾಶವಿದ್ದಲ್ಲಿ ಕೇಂದ್ರ ಸರ್ಕಾರದಿಂದ, ಜಿಲ್ಲೆಗೆ ಫುಡ್ ಪ್ರೋಸೆಸಿಂಗ್ ಕೇಂದ್ರ ಮತ್ತು ಜೆಮ್ಸ್ ಅಂಡ್ ಜ್ಯೂಯಲ್ಸ್ ಕೇಂದ್ರದ ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ನಿಂದ ಡಿಲಿಟ್ ಆಗಿರುವ 120000 ಹೆಸರುಗಳ ಮರು ಸೇರ್ಪಡೆಗೆ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು, ಕೂಪನ್ ಕಾರ್ಡ್ ಹಾಗೂ ಪಡಿತರ ವಿತರಣೆಯ ಸಮಸ್ಯೆಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನರ್ಮ್ ಬಸ್ ಗಳ ಓಡಾಟ ಮತ್ತು ಸಮಸ್ಯೆಗಳ ಬಗ್ಗೆ ಸಮರ್ಪಕ ವರದಿ ನೀಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಕೇಂದ್ರದ ದೀನ ದಯಾಳ್ ಉಪಾಧ್ಯಾಯ ಜ್ಯೋತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಸಂಸದರು, ಜಿಲ್ಲೆಯಲ್ಲಿ ಪ್ರಸ್ತುತ 3024 ಮನೆಗಳನ್ನು ಈ ಯೋಜನೆಗೆ ಗುರುತಿಸಲಾಗಿದ್ದು, 9.41 ಕೋಟಿ ಅಂದಾಜು ವೆಚ್ಚ ತಯಾರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಸ್ತುತ ಗುರುತಿಸಲಾಗಿರುವ ಮನೆಗಳ ಮರು ಸರ್ವೆ ನಡೆಸಿ ಅಗತ್ಯವಿರುವರಿಗೆ ಶೀಘ್ರದಲ್ಲಿ ಸಂಪರ್ಕ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕಿ ನಯನಾ ಉಪಸ್ಥಿತರಿದ್ದರು.