ನಗರದ ಅಭಿವೃದ್ಧಿಗೆ ಸಾಮರಸ್ಯದ ಬದುಕು ಮುಖ್ಯ : ಜೆ ಆರ್ ಲೋಬೋ
ಮಂಗಳೂರು: ನಗರವು ಪ್ರಗತಿಯನ್ನು ಕಾಣಲು ಆ ಭಾಗದ ಜನತೆಯು ಸಾಮರಸ್ಯದಿಂದ ಬದುಕುವುದರ ಜೊತೆಗೆ ತ್ಯಾಗ ಮನೋಭಾವದ ಪರಿಕಲ್ಪನೆಯನ್ನು ಹೊಂದಬೇಕು ಎಂದು ಶಾಸಕ ಜೆ ಆರ್ ಲೋಬೋ ಹೇಳಿದ್ದಾರೆ.
ಅವರು ಇಂದು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಗರದ ಸೆಬಾಸ್ಟಿಯನ್ ಪ್ಲ್ಯಾಟಿನಂ ಜ್ಯೂಬಿಲಿ ಆಡಿಟೊರಿಯಂ ನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಭಾರತದಲ್ಲಿಯೇ ಮಂಗಳೂರು ನಗರವು ವಾಸ್ತವ್ಯಕ್ಕೆ ಯೋಗ್ಯವಾದ ನಗರವಾಗಿದ್ದು, ಮೊದಲನೇ ಸ್ಥಾನದಲ್ಲಿದೆ. ಏಷ್ಯಾದ 2ನೇ ಮತ್ತು ವಿಶ್ವದ 11ನೇ ನಗರವಾಗಿಯೂ ಗುರುತಿಸಿಕೊಂಡಿದೆ ಎಂದು ತಿಳಿಸಿದರು. ಕಳೆದ 5 ವರ್ಷದ ಅವಧಿಯಲ್ಲಿ ಮಂಗಳೂರು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಮಹಾನಗರ ಪಾಲಿಕೆ ಮಂಗಳೂರಿನ ಸಮಗ್ರ ಅಭಿವೃದ್ದಿಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ ಹಾಗೂ ನಗರದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಕಳೆದ 5 ವರ್ಷಗಳಿಂದಲೂ ನಿರಂತರ ಅಭಿವೃದ್ದಿಯ ಕಾರ್ಯಗಳನ್ನು ಮಾಡುತ್ತಿದ್ದು ಇನ್ನು ಮುಂದೆಯೂ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ಭರವಸೆಯಿತ್ತರು.
ಮಂಗಳೂರಿನ ಜನತೆಯು ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು ಯೆಯ್ಯಾಡಿ ಪ್ರದೇಶದ ಜನರು ರಸ್ತೆಯ ಅಗಲೀಕರಣಕ್ಕಾಗಿ ಉಚಿತವಾಗಿ ತಮ್ಮ ಜಾಗವನ್ನು ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನೀಲ್ ಮಾತನಾಡಿ ನಗರದಲ್ಲಿ ಇಂದು 2 ಇಂದಿರಾ ಕ್ಯಾಂಟೀನ್ಗಳು ಲೋಕಾರ್ಪಣೆಗೊಂಡಿದ್ದು ಸಂತಸ ತಂದಿದೆ ಎಂದರು ಇನ್ನುಳಿದ ಕ್ಯಾಂಟೀನ್ಗಳು ಸದ್ಯದಲ್ಲಿಯೇ ಕಾರ್ಯಚರಿಸಲಿದೆ ಎಂದು ತಿಳಿಸಿದರು. ಅಲ್ಲದೇ ತಮ್ಮ ಒಂದು ವರ್ಷದ ಅವಧಿಯಲ್ಲಿ ರಸ್ತೆಯ ಅಗಲೀಕರಣ, ನೀರಾವರಿ ಸೌಲಭ್ಯ,ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯಕ್ರಮದ ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ಹೇಳಿದರು. ಉಪ ಮೇಯರ್ ರಜನೀಶ್ ಕಾಪಿಕಾಡ್ ಹಾಗೂ ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮಾತನಾಡಿದರು
ಸಮಾರಂಭದಲ್ಲಿ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸಭಿತಾ ಮಿಸ್ಕಿತ್, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗವೇಣಿ, ಪಾಲಿಕೆ ಆಯುಕ್ತ ಮಹಮ್ಮದ್ ನಜೀರ್, ಉಪ ಆಯುಕ್ತ ಕೆ ಎಸ್ ಲಿಂಗೇಗೌಡ, ಹಾಗೂ ಮಹಾನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.