‘ನಮೋ’ ಎಂದರೆ ‘ನಮಗೆ ಮೋಸ’ ಎಂಬುದು ಜನರಿಗೆ ಅರ್ಥವಾಗುತ್ತಿದೆ – ಪ್ರಮೋದ್ ಮಧ್ವರಾಜ್
ಉಡುಪಿ : ನಮೋ ಎಂದರೆ ನರೇಂದ್ರ ಮೋದಿ ಅಲ್ಲ ಬದಲಾಗಿ ನಮಗೆ ಮೋಸ ಎಂಬುದು ದೇಶದ ಜನತೆಗೆ ಈಗ ಅರ್ಥವಾಗುತ್ತಿದೆ. ದೇಶದಲ್ಲಿ ನರೇಂದ್ರ ಮೋದಿ ಒಬ್ಬರನ್ನು ಬಿಟ್ಟು ಬೇರೆ ಎಲ್ಲರೂ ದುಃಖದಲ್ಲಿಯೇ ದಿನದೂಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ಆರ್ಥಿಕ ನೀತಿಯ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಜನರು ಬಹಳ ನಿರೀಕ್ಷೆ ಇಟ್ಟು ಮೋದಿಯವರನ್ನು ಆಯ್ಕೆ ಮಾಡಿದ್ದು ಪುಲ್ವಾಮ ಮತ್ತು ಬಾಲಾಕೋಟ್ ಘಟನೆಗಳನ್ನು ಮುಂದಿಟ್ಟುಕೊಂಡು ಜನರನ್ನು ಮನಸ್ಸನ್ನು ಗೆದ್ದು ಅಧಿಕಾರಕ್ಕೆ ಬಂದ ಮೋದಿಯವರ ಸರಕಾರ ಇಂದು ಬಡ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಮೋದಿಯವರ ತಪ್ಪು ಆರ್ಥಿಕ ನೀತಿಯ ಪರಿಣಾಮ, ಎಲ್ಲಾ ರೀತಿಯ ಉದ್ಯಮಗಳು ನಷ್ಟದ ಅಂಚಿನಲ್ಲಿವೆ. ದೇಶದಲ್ಲಿ ಎಲ್ಲಾ ವರ್ಗದ ಜನರು ಕೂಡ ತಮ್ಮ ಉದ್ಯಮಗಳನ್ನು ನಷ್ಟದಲ್ಲಿರಿಸಿಕೊಂಡು ನೋವು ತಿನ್ನುತ್ತಿದ್ದು ಇಡೀ ದೇಶದ ಜನತೆ ದುಃಖದಲ್ಲಿದ್ದರೆ ಮೋದಿ ಮಾತ್ರ ಸಂತೋಷ ಪಡುತ್ತಿದ್ದಾರೆ. ಹಿಂದಿನ ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ ದೇಶದ ಆರ್ಥಿಕ ಸ್ಥಿತ ಉತ್ತಮವಾಗಿದ್ದರೆ ಇಂದು ಅದು ದೇಶವನ್ನು ಅವನತಿಯತ್ತ ಕೊಂಡೊಯ್ಯಲು ಕಾರಣವಾಗಿದೆ ಎಂದರು.
ರಾಜ್ಯದ ಬಿಜೆಪಿ ಸರಕಾರ ಕೂಡ ಅದರಿಂದ ಏನು ಹೊರತಾಗಿಲ್ಲ. ಕಳೆದ 6 ತಿಂಗಳಿನಿಂದ ಬಸವ ವಸತಿಯೋಜನೆಯ ಒಂದೇ ಒಂದು ಫಲಾನುಭವಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಸಿದ್ದರಾಮಯ್ಯ ಸರಕಾರ ಘೋಷಣೆ ಮಾಡಿದ್ದ ಹಾಲಿನ ಮೇಲಿನ ಪ್ರೋತ್ಸಾಹ ಧನ ಹೈನುಗಾರರಿಗೆ ನೀಡಿಲ್ಲ. ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳೇ ಮುಂದುವರೆಯುತ್ತಿವೆ ಬಿಟ್ಟರೆ ಯಾವುದೇ ಹೊಸ ಯೋಜನೆ ತರುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಜೊತೆ ಚೆಲ್ಲಾಟವಾಡುತ್ತಿವೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಯು ಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಾಯಕರಾದ ಪಿ ವಿ ಮೋಹನ್, ಹರೀಶ್ ಕಿಣಿ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.