ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ – ಡಿಕೆ ಶಿವಕುಮಾರ್

Spread the love

ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ – ಡಿಕೆ ಶಿವಕುಮಾರ್

ಕುಂದಾಪುರ: ಉಪ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ಯೋಚನೆ ಇಲ್ಲ. ಕರ್ಮಣ್ಯೇ ವಾದಿಕಾರಸ್ಥೆ ಮಾ ಫಲೇಶು ಕದಾಚನ ಎನ್ನುವ ಮಾತುಗಳಲ್ಲಿ ವಿಶ್ವಾಸ ಇದೆ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.


ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಚುನಾವಣಾ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಸಮೀಕ್ಷೆಗಳು ನಡೆಯುತ್ತವೆ. ಸಮೀಕ್ಷೆಗಳು ಏನಾಯ್ತು ? ಯುಪಿ- ಹರಿಯಾಣದಲ್ಲಿ ಏನಾಯ್ತು ? ಸಮೀಕ್ಷೆ ಕಟ್ಟಿಕೊಂಡು ರಾಜಕೀಯ ಮಾಡೋಕೆ ಆಗಲ್ಲ. ಸಮೀಕ್ಷೆಯವರ ಸಿಸ್ಟಮ್ ಬೇರೆಯೇ ಇರುತ್ತದೆ. ನಮ್ಮ ನಿರೀಕ್ಷೆ ಬೇರೇಯೇ ಇರುತ್ತದೆ. ಜನರ ಹೃದಯ ಗೆದ್ದವರು ವಿಶ್ವಾಸ ಗೆದ್ದವರು ಗೌಪ್ಯ ಮತದಾನದಲ್ಲಿ ಗೆಲ್ಲುತ್ತಾರೆ ಎಂದರು.


ಚುನಾವಣೆಗೆ ಮುಂಚಿತವಾಗಿ ದೇವಸ್ಥಾನಕ್ಕೆ ಬಂದಿದ್ದೆವು. ದೇವರಿಗೆ ಸಲ್ಲಿಸಿದ ಪ್ರಾರ್ಥನೆಯಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಐದು ಗ್ಯಾರೆಂಟಿ ಕೊಡಲು, ಆಡಳಿತ ಮಾಡಲು ತಾಯಿ ಮೂಕಾಂಬಿಕೆ ಅವಕಾಶ ಕೊಟ್ಟಿದ್ದಾಳೆ. ಇಡಗುಂಜಿ ಗಣಪತಿ, ಮುರುಡೇಶ್ವರ ಶಿವನ ದರ್ಶನವನ್ನೂ ಮಾಡುತ್ತೇನೆ. ಎಲ್ಲಾ ಕಡೆ ದೇವರು ಒಳ್ಳೇದು ಮಾಡುತ್ತಾನೆ ಎಂಬ ನಂಬಿಕೆ ಹಾಗೂ ವಿಶ್ವಾಸ ಇದೆ.

ಕೊಲ್ಲೂರು ಶ್ರೀ ದೇವಿಯ ಸನ್ನಿಧಿಯಲ್ಲಿ ಕೆಪಿಸಿಸಿ ಅಧ್ಯಕ್ಷ, ಸರ್ಕಾರದ ಪ್ರತಿನಿಧಿಯಾಗಿ ಹಾಗೂ ಉಪಮುಖ್ಯಮಂತ್ರಿಯಾದ ನಾನು ಹೇಳುತ್ತಿದ್ದೇನೆ. ರಾಜ್ಯದ ಯಾವುದೇ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ ಭರವಸೆ ವ್ಯಕ್ತಪಡಿಸಿದರು.


ಬಡವರ ಪರವಾಗಿರುವ ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷ ಅನ್ಯಾಯ ಮಾಡಲ್ಲ. ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಫಲಾನುಭವಿಗಳ ಪಟ್ಟಿ ನೀಡಲು ಹೇಳಿದ್ದೇವೆ. ಎಲ್ಲರಿಂದ ಮರು ಅರ್ಜಿ ಪಡೆಯುತ್ತೇವೆ. ಐದು ಗ್ಯಾರಂಟಿ ಯೋಜನೆ ಜಾರಿ ನೋಡಿಕೊಳ್ಳಲು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಗಳ ಉಸ್ತುವಾರಿಯಲ್ಲಿ ನ್ಯಾಯ ನೀಡಲು ಸರ್ಕಾರ ಬದ್ಧವಾಗಿದೆ. ಯಾರು ಭಯಪಡಬೇಕಾಗಿಲ್ಲ. ವಿರೋಧ ಪಕ್ಷಗಳು ಏನಾದರೂ ಮಾತನಾಡಬೇಕಲ್ಲ ಅದಕ್ಕಾಗಿ ಮಾತನಾಡುತ್ತಿದೆ ಎಂದರು.

ನಕ್ಸಲ್ ಮುಖಂಡ ವಿಕ್ರಂ ಗೌಡ ಅವರ ಎನ್ಕೌಂಟರ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಪೊಲೀಸರು ಪೊಲೀಸರ ಕೆಲಸವನ್ನು ಮಾಡುತ್ತಾರೆ. ಗೃಹ ಸಚಿವ ಪರಮೇಶ್ವರ್ ಅವರ ಕೆಲಸ ಮಾಡ್ತಾರೆ. ನಾನು ರಾಜ್ಯದಲ್ಲಿ ನನ್ನ ಕೆಲಸ ಮಾಡುತ್ತೇನೆ. ರಾಜ್ಯದ ಜನರನ್ನು ರಕ್ಷಣೆ ಮಾಡೋದು ನಮ್ಮೆಲ್ಲರ ಕೆಲಸ. ಕೇರಳ ಹಾಗೂ ಕರ್ನಾಟಕದಲ್ಲಿ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಸರ್ಕಾರದ ಎಲ್ಲ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗಿದೆ.

ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ನಾನು ಹೆಚ್ಚು ಮಾತಾಡಲ್ಲ ಎಂದರು.

ನಂದಿನಿ ಹಾಲಿನ ಮಾರ್ಕೆಟ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ಅವಕಾಶ ಸಿಕ್ಕರೆ, ಕೇಂದ್ರ ಸರ್ಕಾರದ ನಬಾರ್ಡ್ ಸಾಲ ಕಡಿತ ಮಾಡಿದ ವಿಚಾರ ಹಾಗೂ ರಾಜ್ಯಕ್ಕೆ ಆಗಿರುವ ಹಾಗೂ ಆಗುತ್ತಿರುವ ಅನ್ಯಾಯಗಳನ್ನು ಪ್ರಸ್ತಾಪ ಮಾಡುತ್ತಾರೆ ಹಾಗೂ ನ್ಯಾಯ ಒದಗಿಸಲು ಮನವಿ ಮಾಡುತ್ತಾರೆ. ಯಾವುದೇ ಕಾರಣದಿಂದಲೂ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಕೈಬಿಡುವ ಪ್ರಶ್ನೆಯೇ ಇಲ್ಲ. ಇನ್ನೂ ಮೂರು ವರ್ಷ ಸೇರಿ ಮುಂದಿನ ಎಂಟು ವರ್ಷಗಳ ಕಾಲ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಯು.ಬಿ.ಶೆಟ್ಟಿ, ಎಂ.ಎ.ಗಫೂರ್, ಅಶೋಕ್ಕುಮಾರ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ಕಾಂಚನ್, ಎಸ್.ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ ಹಾಗೂ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಇದ್ದರು

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಗುರುವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಪತ್ನಿ ಉಷಾ, ಪುತ್ರಿ ಆಭರಣ ಅವರೊಂದಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಅರೆ ಶಿರೂರು ಹೆಲಿಪ್ಯಾಡ್‌ಗೆ ಬಂದಿಳಿದ ದಿಕೆ ಶಿವಕುಮಾರ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ದೇವಸ್ಥಾನದ ಮುಂಭಾಗ ಕಂಬದ ಗಣಪತಿಗೆ ಕೈ ಮುಗಿದು, ಶ್ರೀ ದೇವಿಯ ಹಾಗೂ ವೀರಭದ್ರ ಸ್ವಾಮಿ ದರ್ಶನ ಪಡೆದುಕೊಂಡಿದ್ದ ಅವರು, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಹಿರಿಯ ಅರ್ಚಕರಾದ ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ತಂತ್ರಿ ನಿತ್ಯಾನಂದ ಅಡಿಗ, ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ವರ ಅಡಿಗ ಇದ್ದರು.

ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಎಸ್.ಪಿ ಡಾ.ಅರುಣಕುಮಾರ, ಜಿ.ಪಂ ಸಿಇಓ ಪ್ರತೀಕ್ ಬಾಯಲ್, ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಸದಸ್ಯರಾದ ರಾಜೇಶ್ ಕಾರಂತ, ರಘುರಾಮ ದೇವಾಡಿಗ, ಮಾಲಿಂಗ ವೆಂಕ ನಾಯ್ಕ್, ಧನಾಕ್ಷೀ ವಿಶ್ವನಾಥ್ ಪೂಜಾರಿ, ಸುಧಾ, ಸುರೇಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ ಕೊಡವೂರು, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್, ಪ್ರಮುಖರಾದ ಎಂ.ಎ.ಗಫೂರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ಕಾಂಚನ್ ಉಡುಪಿ, ಎಸ್.ರಾಜು ಪೂಜಾರಿ, ನವೀನ್‌ಚಂದ್ರ ಶೆಟ್ಟಿ ತೊಂಬತ್ತು, ಬ್ಲಾಕ್ ಕಾಂಗ್ರೆಸ್ ಅರವಿಂದ ಪೂಜಾರಿ ಪಡುಕೋಣೆ, ಪ್ರದೀಪ್‌ಕುಮಾರ್ ಶೆಟ್ಟಿ ಕಾವ್ರಾಡಿ ಇದ್ದರು.

ಪೈಲೆಟ್‌ಗಾಗಿ ಕಾದು ಸುಸ್ತಾದ ಡಿಕೆಶಿ :
ಮುರ್ಡೇಶ್ವರಕ್ಕೆ ತೆರಳಲು ನಿಗದಿತ ವೇಳಾಪಟ್ಟಿಯ ಸಮಯಕ್ಕಿಂತ ಮುಂಚಿತವಾಗಿ ಅರೆ ಶಿರೂರು ಹೆಲಿಪ್ಯಾಡ್‌ಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬ ಸದಸ್ಯರು ಸುಮಾರು 20 ನಿಮಿಷಗಳ ಕಾಲ ಹೆಲಿಪ್ಯಾಡ್‌ನಲ್ಲಿಯೇ ಕಾಯಬೇಕಾದ ಪ್ರಸಂಗ ನಡೆಯಿತು. ಹೆಲಿಕಾಪ್ಟರ್ ಲ್ಯಾಂಡ್ ಆದ ಬಳಿಕ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಆಗಮಿಸಿದ್ದ ಇಬ್ಬರು ಪೈಲಟ್‌ಗಳನ್ನು ಮರಳಿ ಹೆಲಿಪ್ಯಾಡ್‌ಗೆ ತಲುಪಿಸುವಲ್ಲಿ ವಿಳಂಬವಾಗಿತ್ತು. 12.10 ಕ್ಕೆ ಹೆಲಿಪ್ಯಾಡ್‌ಗೆ ಆಗಮಿಸಿದ್ದ ಡಿಸಿಎಂ ಡಿಕೆಶಿ ಅವರನ್ನು ಕುರಿಸಿಕೊಂಡ ಹೆಲಿಕಾಪ್ಟರ್ 12.30 ರ ವೇಳೆಗೆ ಟೇಕ್ ಆಫ್ ಆಗಿದೆ.


Spread the love