ನಾಗರಿಕ ಸೇವಾ ಸಮಿತಿಯ ನಿತ್ಯ ರಕ್ತ ಸ್ಪಂದನೆ ಸಂಘಟನೆ ಉದ್ಘಾಟನೆ
ಉಡುಪಿ: ಉಡುಪಿ ನಾಗರಿಕ ಸೇವಾ ಸಮಿತಿಯ ವತಿಯಿಂದ ಜೋಸ್ ಅಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ನಿತ್ಯ ರಕ್ತ ಸ್ಪಂದನೆ ಎಂಬ ರಕ್ತದಾನಿಗಳ ಸಂಘಟನೆಯ ಉದ್ಘಾಟನೆ ಮಂಗಳವಾರ ನಡೆಯಿತು.
ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿ ಒಂದು ಬಾರಿ ದಾನಿಗಳಿಂದ ರಕ್ತವನ್ನು ಪಡೆದರೇ ಅದನ್ನು 30 ದಿನಗಳವರೆಗೆ ಮಾತ್ರ ಕಾಪಿಡಬಹದಾಗಿದೆ, ನಂತರ ಅದು ಉಪಯೋಗಕ್ಕೆ ಬರುವುದಿಲ್ಲ, ಆದ್ದರಿಂದ ಅದನ್ನು ವ್ಯರ್ಥವಾಗಿ ವಿಸರ್ಜನೆ ಮಾಡಬೇಕಾಗುತ್ತದೆ. ಆದ್ದರಿಂದ ರಕ್ತದಾನಿಗಳಿಂದ ಅಗತ್ಯಕ್ಕೆ ತಕ್ಕಂತೆ ರಕ್ತ ಪಡೆಯುವುದು ಸೂಕ್ತ ಎಂದವರು ಹೇಳಿದರು.
ಪ್ರಸ್ತುತ ರಕ್ತದಾನ ಶಿಬಿರಗಳಿಂದ ಅನೇಕ ಬಾರಿ ಹೆಚ್ಚುವರಿ ರಕ್ತ ಸಂಗ್ರಹವಾಗಿ ವ್ಯರ್ಥವಾಗುತ್ತದೆ. ಆದರೇ ಶಿಬಿರಗಳನ್ನು ನಡೆದಿದ್ದರೇ ರಕ್ತದ ಕೊರತೆಯೂ ಆಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ರಕ್ತದಾನಿಗಳ ಗುಂಪನ್ನು ರಚಿಸಿ, ಅಗತ್ಯವಿರುವಾಗ ಒಬ್ಬರಲ್ಲದಿದ್ದರೇ ಇನ್ನೊಬ್ಬರಾದರೂ ರಕ್ತ ನೀಡುವುದಕ್ಕೆ ಸಾಧ್ಯವಾಗುತ್ತದೆ. ರಕ್ತದಾನ ಶಿಬಿರಗಳನ್ನು ನಡೆಸಿ ಆಸ್ಪತ್ರೆಯಲ್ಲಿ ಹೆಚ್ಚುವರಿ ರಕ್ತವನ್ನು ಸಂಗ್ರಸಿಡುವುದಕ್ಕಿಂತಲೂ, ರಕ್ತ ಬೇಕಾದ ದಾನಿಗಳಿಂದ ತಕ್ಷಣ ಪಡೆದು ರೋಗಿಗಳಿಗೆ ನೀಡುವುದು ಸರಿಯಾದ ಕ್ರಮ. ಈ ನಿಟ್ಟಿನಲ್ಲಿ ಜಿಲ್ಲಾ ನಾಗರಿಕ ಸಮಿತಿ ನಿತ್ಯ ರಕ್ತ ಸ್ಪಂದನೆ ಎಂಬ ಕಾರ್ಯಕ್ರಮದ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಸ್ಥಳೀಯ ಮಹಾಲಕ್ಷ್ಮೀ ಕೋಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕಿ ರತ್ನಾ ಎಸ್.ಬಂಗೇರ, ಉದ್ಯಮಿ ರಾಘವೇಂದ್ರ ಕಿಣಿ, ಅಲುಕ್ಕಾಸ್ ಸಂಸ್ಥೆಯ ವ್ಯವಸ್ಥಾಪಕ ಫ್ರೆಡ್ ಆ್ಯಂಟೋನಿ ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಪ್ರ.ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ವಾಗತಿಸಿದರು, ತೃಷಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಜೋಸ್ ಅಲುಕ್ಕಾಸ್ ಸಂಸ್ಥೆಯ 34 ಮಂದಿ ಸಿಬ್ಬಂದಿಗಳು ಸ್ಪಯಂಪ್ರೇರಿತ ರಕ್ತದಾನಕ್ಕೆ ಹೆಸರು ನೋಂದಾಯಿಸಿದರು, ಈ ಪಟ್ಟಿಯನ್ನು ನಿತ್ಯಾನಂದ ಒಳಕಾಡು ಅವರು ಡಾ.ಮಧುಸೂದನ ನಾಯಕ್ ಅವರಿಗೆ ಹಸ್ತಾಂತರಿಸಿದರು.