ನಾನೇ ಅಲ್ಲ, ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗಲ್ಲ: ಎಚ್.ಸಿ.ಮಹಾದೇವಪ್ಪ
ಮೈಸೂರು: ನಾನೇ ಅಲ್ಲ, ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ನಾಯಕರೇ ಈ ರೀತಿಯ ಪಿತೂರಿ ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ವಲಸೆ ಬಂದ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ವಿಧಾನಸಭೆ ಚುನಾವಣೆ ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದ ಕಾರಣ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿರಲಿಲ್ಲ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.
‘ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಸ್ನೇಹ ಸಂಬಂಧ ಹಳಸಿದೆ ಎಂದು ಹೇಳಿದವರು ಯಾರು?, ಈ ಬಗ್ಗೆ ಸಿದ್ದರಾಮಯ್ಯನವರು ಏನಾದರೂ ಹೇಳಿದ್ದಾರಾ?, ನಾವು ಚೆನ್ನಾಗೆ ಇದ್ದೇವೆ’ ಎಂದ ಅವರು, ‘ನಮ್ಮಿಬ್ಬರ ನಡುವಿನ ಸಂಬಂಧ ಕೆಟ್ಟಿದೆ ಎಂದು ಸುಳ್ಳು ಸುದ್ದಿ ಸೃಷ್ಟಿಸಿ ಲಾಭ ಮಾಡಿಕೊಳ್ಳುವ ಯತ್ನ ನಡೆದಿದೆ. ಆದರೆ, ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ’ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಗೆಲುವು ನನ್ನ ಸೋಲಿಗೆ ಕಾರಣವಲ್ಲ. ಬದಲಿಗೆ ಬಿಜೆಪಿ ಗೆಲ್ಲಲಾಗದ ಕ್ಷೇತ್ರಗಳಲ್ಲಿ ತನ್ನ ಮತಗಳನ್ನು ವರ್ಗಾವಣೆ ಮಾಡಿದೆ ಎಂದು ಆರೋಪಿಸಿದರು.
‘ನನ್ನ ಸೋಲಿಗಿಂತ ಸಿದ್ದರಾಮಯ್ಯ ಹಾಗೂ ಪಕ್ಷದ ಸೋಲು ಆಘಾತ ಮೂಡಿಸಿದೆ. ಈ ಆಘಾತದಿಂದ ಹೊರಬರಲು ಒಂದೂವರೆ ತಿಂಗಳು ಬೇಕಾಯಿತು’ ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ತಿಳಿಸಿದರು.