ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಹೋರಾಟದಿಂದ ಸಿ.ಎ. ಸಾಧ್ಯ – ಸಿ.ಎ. ಆದರ್ಶ್ ಶೆಣೈ

Spread the love

“ನಿರಂತರ ಅಭ್ಯಾಸ, ಸಮರ್ಪಣಾ ಭಾವದ ಹೋರಾಟದಿಂದ ಸಿ.ಎ. ಸಾಧ್ಯ” ಸಿ.ಎ. ಆದರ್ಶ್ ಶೆಣೈ

ಮೂಡುಬಿದಿರೆ: “ಕ್ಷಿಪ್ರವಾಗಿ ಬೆಳೆಯುತ್ತಿರುವ ವಾಣಿಜ್ಯ ಕ್ಷೇತ್ರದಲ್ಲಿ ಚಾರ್ಟರ್ಡ್ ಎಕೌಂಟೆಂಟ್‍ಗಳ ಬೇಡಿಕೆ ಬಹಳಷ್ಟಿದೆ. ಆದರೆ ಸಿ.ಎ. ಆಗುವುದು ಅಷ್ಟು ಸುಲಭದ ಮಾತಲ್ಲ. “ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಸಮರ್ಪಣಾ ಭಾವದ ಹೋರಾಟ ಮತ್ತು ನೈಪುಣ್ಯತೆ ಇದ್ದಲ್ಲಿ ಇದು ಸಾಧ್ಯವಾಗುವುದು.” ಎಂದು ಸಿ.ಎ. ಆದರ್ಶ್ ಶೆಣೈ ಹೇಳಿದರು.

ಆಳ್ವಾಸ್ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್ ನಲ್ಲಿ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದಿಂದ ಆಯೋಜಿಸಿದ್ದ ಒಂದು ದಿನದ “ಟೆಕ್ನಿಕಲ್ ಮತ್ತು ನಾನ್-ಟೆಕ್ನಿಕಲ್ ಸ್ಕಿಲ್ಸ್ ಫಾರ್ ಸಿ.ಎ.” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. “ಸಿ.ಎ. ತರಬೇತಿ ಇತ್ತೀಚೆಗೆ ಎಲ್ಲಾ ಜಾಗದಲ್ಲೂ ಸಾಮಾನ್ಯವಾಗಿದ್ದು, ಆದರೆ ಸುಲಭವಾಗಿ ಸಿ.ಎ. ಮುಗಿಸುತ್ತೇನೆ ಎನ್ನುವುದು ಕನಸಿನ ಮಾತು. ಇದೊಂದು ಹೋರಾಟ, ಅನೇಕ ಸವಾಲುಗಳನ್ನು ಎದುರಿಸಿ ಅಭ್ಯಾಸ ಮಾಡುವ ನಿರಂತರ ಪ್ರಕ್ರಿಯೆ. ಸತತ ಪ್ರಯತ್ನ ಮಾಡುವ ಯಾವುದೇ ವಿದ್ಯಾರ್ಥಿ ಹಿಂಜರಿಕೆಯಿಲ್ಲದೆ ಈ ಕೋರ್ಸ್‍ನ್ನು ಆಯ್ಕೆ ಮಾಡಿಕೊಳ್ಳಬಹುದು” ಎಂದರು. ಸಾಮಾನ್ಯ ವಿದ್ಯಾರ್ಥಿಯೊಬ್ಬ ಸಿ.ಎ. ಆಗಲು ಬೇಕಾದ ಕೌಶಲ್ಯಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ “ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ದಿನಚರಿಯನ್ನು ಬರೆದುಕೊಳ್ಳಬೇಕು. ದಿನವೂ ನಾನು ಏನು ಕಲಿತಿದ್ದೇನೆ, ಏನು ಕಲಿಯಬಹುದು ಎನ್ನುವುದನ್ನು ಆಲೋಚನೆ ಮಾಡಿ, ಅದನ್ನು ಕಾರ್ಯರೂಪಕ್ಕೆ ತಂದಾಗ ಸಿ.ಎ. ವಿದ್ಯಾರ್ಥಿಯ ಬದುಕು ಯಶಸ್ಸಿನತ್ತ ಸಾಗುವುದು ಖಂಡಿತ. ತಮ್ಮ ಹೊಸ ಆಲೋಚನೆಗಳು, ಹೊಸ ಯೋಜನೆಗಳು ಮತ್ತು ಪೂರ್ವ ನಿಯೋಜಿತ ನಿರ್ಧಾರವೇ ಒಬ್ಬ ವಿದ್ಯಾರ್ಥಿಯನ್ನು ವೃತ್ತಿಪರನನ್ನಾಗಿ ರೂಪಿಸುತ್ತದೆ.” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಾಣಿಶ್ರೀ, ಸಾಹುಲ್ ಹಮೀದ್, ನಿಖಿತಾ ಎಮ್., ವರುಣ್ ಕೆ. ಎಸ್., ಕೀರ್ತನಾ, ಮಹಮ್ಮದ್ ನೌಫಲ್ ಮತ್ತು ಅಮಲ್ ಮ್ಯಾಥ್ಯೂರನ್ನು ಸನ್ಮಾನಿಸಲಾಯಿತು.

ವೃತ್ತಿಪರ ಕೋರ್ಸ್‍ನ ಸಂಯೋಜಕ ಅಶೋಕ್ ಕೆ. ಜಿ., ಸಿ.ಎ. ಫೌಂಡೇಶನ್ ವಿಭಾಗದ ಸಂಯೋಜಕ ಅನಂತಶಯನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಪೂರ್ತಿ ಭಟ್ ಪ್ರಾರ್ಥಿಸಿ, ರಕ್ಷಣ್ಯಾ ಸ್ವಾಗತಿಸಿದರು. ರಿಯಾನಾ ಕ್ರಿಸ್ಟಲ್ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿ, ಮನೀಶ್ ಎಸ್. ಕೋಟ್ಯಾನ್ ವಂದಿಸಿದರು.


Spread the love