ನಿರಂತರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ – ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಖಂಡನೆ
ಉಡುಪಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಜನರ ಬದುಕಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದೆ. ದೇಶದ ಜನತೆ ಈಗಾಗಲೇ ಕರೋನಾ ಸಂಕಷ್ಟದಿಂದ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟ ಆಗಿರುವ ಸಂದರ್ಭದಲ್ಲಿ ಇಂಧನಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಘಟಕ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಘಟಕದ ಅಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ ಅವರು ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಮರೆತಿದೆ. ಇತ್ತ ಉದ್ಯೋಗ ಸೃಷ್ಟಿಯೂ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣ ಕೂಡ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಆಡಳಿತ ನಡಸುವಲ್ಲಿ ವಿಫಲ ಆಗುತ್ತದೆ.
ಕೊರೋನಾ ವೈರಸ್ ವ್ಯಾಪಕ ಆಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆ ಆಗಿದೆ. ಬಡ, ಮಧ್ಯಮ ವರ್ಗದ ಜನರು ಕೆಲಸವಿಲ್ಲದೆ ದಿನ ಕಳೆಯುತ್ತಿದ್ದಾರೆ. ಉದ್ಯೋಗ ವಂತ ಯುವಜನತೆಯ ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಇಂತಹ ಕಷ್ಟದ ದಿನಗಳಲ್ಲಿ ಸಹ ಕೇಂದ್ರ ಸರ್ಕಾರ ಮನಸ್ಸಿಗೆ ಬಂದಂತೆ ಪೆಟ್ರೋಲ್, ಡೀಸೆಲ್ ದರ ಏರುತ್ತಿರುವುದು ಸರಿಯಲ್ಲ.
ಪೆಟ್ರೋಲ್, ಡಿಸೇಲ್ ದರವನ್ನು ಕೂಡಲೇ ಕಡಿಮೆಗೊಳಿಸಬೇಕು. ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡ ಹಾಗೂ ಮಧ್ಯಮ ವರ್ಗ ಸೇರಿ ದೇಶದ ಎಲ್ಲ ಜನರಿಗೆ ಆರ್ಥಿಕ ಭದ್ರತೆಯ ವಾತಾವರಣ ಸೃಷ್ಟಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.