ನಿರ್ದೇಶಕನಿಂದ ಹಿಡಿದು ತಾಂತ್ರಿಕ ವರ್ಗದ ಕಟ್ಟಕಡೆಯ ವ್ಯಕ್ತಿಯ ಪಾತ್ರವೂ ಮುಖ್ಯ- ಮೋಹನ್‍ಕೃಷ್ಣನ್

Spread the love

ನಿರ್ದೇಶಕನಿಂದ ಹಿಡಿದು ತಾಂತ್ರಿಕ ವರ್ಗದ ಕಟ್ಟಕಡೆಯ ವ್ಯಕ್ತಿಯ ಪಾತ್ರವೂ ಮುಖ್ಯ- ಮೋಹನ್‍ಕೃಷ್ಣನ್

ವಿದ್ಯಾಗಿರಿ: ಸಿನಿಮಾ ನಿರ್ಮಾಣ ಎಂಬುದು ಒಂದು ವ್ಯವಸ್ಥಿತ ಕಾರ್ಯವಾಗಿದ್ದು, ನಿರ್ದೇಶಕನಿಂದ ಹಿಡಿದು ತಾಂತ್ರಿಕ ವರ್ಗದ ಕಟ್ಟಕಡೆಯ ವ್ಯಕ್ತಿಯ ಪಾತ್ರವೂ ಮುಖ್ಯ ವಾಗಿರುತ್ತದೆ ಎಂದು ಚೆನ್ನೈ ಎಲ್.ವಿ ಪ್ರಸಾದ್ ಅಕಾಡೆಮಿಯ ಕಾರ್ಪೋರೇಟ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಮೋಹನ್‍ಕೃಷ್ಣನ್ ಹೇಳಿದರು.

ಇವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಚಿತ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಕಾರ್ಯವು ಮುಖ್ಯವಾಗಿರುತ್ತದೆ . ಆದರೆ ಸಂಕಲನಕಾರನ ಸೃಜನಶೀಲತೆಯ ಸಿನಿಮಾದ ಅಳಿವು ಉಳಿವನ್ನು ನಿರ್ಧರಿಸುತ್ತದೆ. ಸಿನಿಮಾದ ವಸ್ತು ವಿಷಯವು ಅದ್ಬುತವಾಗಿದ್ದರೆ, ಆ ಚಲನಚಿತ್ರವು ಪ್ರೇಕ್ಷಕರನ್ನು ಸುಲಭವಾಗಿ ತಲುಪಬಲ್ಲದು. ಉತ್ತಮ ಕಥೆ, ಅದ್ಭುತ ಛಾಯಾಗ್ರಹಣ, ಕಥೆಗನುಗುಣವಾದ ನಟನೆ ಹಾಗೂ ಆ ದತ್ತಾಂಶಗಳ ನಿರ್ವಹಣೆಯೂ ಕೂಡ ಮುಖ್ಯವಾಗಿರುತ್ತದೆ ಎಂದರು.

ಪ್ರಸ್ತುತ ದಿನಗಳಲ್ಲಿ ಭಾರತೀಯ ಸಿನಿಮಾ ಕ್ಷೇತ್ರವು ಅದೇ ಹಳೆಯ ಸಾಂಪ್ರದಾಯಿಕ ಕಥಾ ಹಂದರವನ್ನು ಹೊಂದಿದ್ದು, ಅದನ್ನು ವಿಶ್ವದೆಲ್ಲೆಡೆ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ನಮ್ಮ ಸಿನಿಮಾ ರಂಗವು ಇಡೀ ವಿಶ್ವದಾದ್ಯಂತ ಅನ್ವಯವಾಗುವ ಕಥಾ ವಿಷಯ ಹಾಗೂ ಉನ್ನತ ಮಟ್ಟದ ತಂತ್ರಜ್ಞಾನಗಳನ್ನು ಬಳಸಿಕೊಂಡ ಸಿನಿಮಾ ನಿರ್ದೇಶಿಸಿದರೆ, ಭಾರತೀಯ ಸಿನಿಮಾವೂ ಜಾಗತಿಕ ಮಾರುಕಟ್ಟೆಯನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಪೆಜತ್ತಾಯ, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಉಪಸ್ಥಿತರಿದ್ದರು. ಅನಿಶ ಸ್ವಾಗತಿಸಿ, ಅಪೇಕ್ಷಾ ವಂದಿಸಿ, ಪವಿತ್ರ ಕಾರ್ಯಕ್ರಮ ನಿರೂಪಿಸಿದರು.


Spread the love