ನೀಲಾವರ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ

Spread the love

ನೀಲಾವರ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ

ಉಡುಪಿ: ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತು, ರುಕ್ಮಿಣಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸೆಪ್ಟೆಂಬರ್ ೨೩ ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನ ಮತ್ತು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರಿಗೆ ರಾಜ್ಯಮಟ್ಟದ ಶಿಕ್ಷಣ ಸೇವಾ ರತ್ನ ಗೌರವವನ್ನು ದೂರದರ್ಶನದ ವಿಶ್ರಾಂತ ನಿರ್ದೇಶಕ ಡಾ.ಮಹೇಶ ಜೋಶಿ ಅವರು ಪ್ರದಾನಿಸಿದರು.

ನೀಲಾವರ ಸೇವಾಭಾವದ ಅವರಂತಹ ಗುರುಗಳಿಂದಲೇ ನಾನು ಕೂಡಾ ಪ್ರೇರಿತನಾಗಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ರಾಜ್ಯದ ವಿವಿದೆಡೆಯಿಂದ ಮತ್ತು ಕರಾವಳಿಯಿಂದ ಆಯ್ಕೆಯಾಗಿದ್ದ ನಾಲ್ವರು ಶಿಕ್ಷಕರನ್ನು ಅಭಿನಂದಿಸಿದರು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಿದರು.

ರಾಜ್ಯ ಎನ್ ಎಸ್ ಎಸ್ ಅಧಿಕಾರಿ, ಸರ್ಕಾರದ ಪದನಿಮಿತ್ತ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಶಿಕ್ಷಕರ ವಿಕಾಸ ಪರಿಷತ್ತಿನ ರಾಜ್ಯಾಧ್ಯಕ್ಷ ಎನ್.ವಿಜಯಕುಮಾರ್, ಸಮ್ಮೇಳನಾಧ್ಯಕ್ಷೆ ಡಾ. ಭುವನೇಶ್ವರಿ ಮೇಲಿನಮಠ, ಪತ್ರಕರ್ತರ ವೇದಿಕೆ ಸ್ಥಾಪಕಾಧ್ಯಕ್ಷ ಮಾರುತಿ ರಾವ್ ಸುರ್ವೆ, ಸಂಘಟಕ ಮಹೇಶಬಾಬು ಸುರ್ವೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿದ್ದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಶೇಖರ ಅಜೆಕಾರು ಅತಿಥಿಗಳನ್ನು ಗೌರವಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರು ಗೌರವ ಸ್ವೀಕರಿಸಿದರು ಮತ್ತು ಬಿಜಾಪುರ, ಕೊಪ್ಪಳ, ಶಹಾಪುರ, ಗುಲ್ಬರ್ಗ, ಬೀದರ್ ಇಳಕಲ್, ಬೆಂಗಳೂರಿನ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಶಸ್ತಿ ಪುರಷ್ಕೃತ ಹೆಬ್ರಿಯ ಎಸ್‌ಆರ್ ಪದವಿಪೂರ್ವ ಕಾಲೇಜಿನ ಕನ್ನಡ ಶಿಕ್ಷಕ ದೀಪಕ್ ಎನ್.ದುರ್ಗ ಅವರು ಈ ಸಂದರ್ಭದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿ ಮೆಚ್ಚುಗೆ ಗಳಿಸಿದರು.


Spread the love