ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರ ಕಾರ್ಯ ಶ್ಲಾಘನೀಯ – ಅಜಿತ್ ಕುಮಾರ್ ಶೆಟ್ಟಿ
- ಜಿಲ್ಲೆಯಲ್ಲಿ ನಾಲ್ಕು ಕೊಲೆಯಾದರು ಸಂಸದೆ ಶೋಭಕ್ಕ ಮಾತ್ರ ನಾಪತ್ತೆ
ಉಡುಪಿ: ಕರಾವಳಿಯನ್ನು ಬೆಚ್ಚಿಬೀಳಿಸಿದ ಪ್ರಕರಣದಿಂದಾಗಿ ರಾಜ್ಯದ ಜನತೆ ಭಯದಲ್ಲಿ ಬದುಕುವ ವಾತಾವರಣವನ್ನು ಸೃಷ್ಠಿ ಮಾಡಿತ್ತು. ಉಡುಪಿ ಜಿಲ್ಲೆಯ ದಕ್ಷ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಡಾ. ಅರುಣ್ ಕೆ ಅವರು ಘಟನೆ ನಡೆದ ಮಾಹಿತಿ ಲಭಿಸಿದ ತಕ್ಷಣ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರಕರಣದ ಕುರಿತು ಮಾಹಿತಿ ಪಡೆದು 5 ತನಿಖಾ ತಂಡಗಳನ್ನು ರಚಿಸಿ ಘಟನೆ ನಡೆದ ಮೂರು ದಿನಗಳ ಒಳಗಡೆ ಆರೋಪಿಯ ಜಾಡನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಕರಾವಳಿಯಲ್ಲಿ ಯಾವುದೇ ಕೊಲೆ ನಡೆದರೂ ಅಲ್ಲಿಗೆ ತೆರಳಿ ಬೊಬ್ಬಿಡುವ ನಮ್ಮ ಜಿಲ್ಲೆಯ ಸಂಸದೆ ಶೋಭಾ ಕರಂದ್ಲಾಜೆಯವರು ಇಂತಹ ಭೀಕರ ಕೊಲೆಯಾದರೂ ಕೂಡ ಎಲ್ಲಿಯೂ ಕಾಣಿಸಿಕೊಂಡಿಲ್ಲ ಅಲ್ಲದೆ ಕನಿಷ್ಠ ಕೊಲೆಯನ್ನು ಖಂಡಿಸುವ ಕೆಲಸ ಕೂಡ ಮಾಡದಿರುವುದು ಜಿಲ್ಲೆಯ ಜನರ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ಘಟನೆ ನಡೆದ ದಿನದಿಂದ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ತಾಳ್ಮೆ ಮೆಚ್ಚುವಂತಾದ್ದಾಗಿದೆ ಈ ನಡುವೆ ನಿಜವಾಗಿಯೂ ಕೆಲವೊಂದು ಕಿಡಿಗೇಡಿ ಮನಸ್ಥಿತಿಯವರು ಫೇಕ್ ಐಡಿ ಫೇಸ್ಬುಕಲ್ಲಿ ರಚಿಸಿ ವಿಕ್ರತಿ ಮೆರೆಯುತ್ತಿದ್ದು ಪೊಲೀಸ್ ಇಲಾಖೆ ಅಂತಹವರನ್ನು ಪತ್ತೆ ಹಚ್ಚಿ ಜಿಲ್ಲೆಯ ಶಾಂತಿ ವ್ಯವಸ್ಥೆಯನ್ನು ಕಾಪಾಡಬೇಕು ಮತ್ತು ಆರೋಪಿಗೆ ಅತ್ಯಂತ ಕಠಿಣ ರೀತಿಯಲ್ಲಿ ಶಿಕ್ಷೆ ಆಗುವಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕು.
ಕೆಲವೊಂದು ಮಾಧ್ಯಮಗಳು ತೀರಾ ಬೇಜವಾಬ್ದಾರಿಯುತವಾಗಿ ವದಂತಿಗಳು, ಊಹಾಪೋಹಗಳನ್ನು ಆಧರಿಸಿ ತೀರಾ ಕೀಳು ಮಟ್ಟದ ಹಾಗು ಕೊಲೆಯಾದವರ ಚಾರಿತ್ರ್ಯ ಹನನವಾಗುವಂತಹ ವರದಿಗಳನ್ನು ಪ್ರಕಟಿಸುವುದು ಅತ್ಯಂತ ಖಂಡನೀಯ. ಕಾರಣ ಏನಿದ್ದರೂ ಇಂತಹದೊಂದು ಹತ್ಯಾಕಾಂಡಕ್ಕೆ ಸಮರ್ಥನೆ ಇಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಆ ಬಗ್ಗೆ ಯಾರಿಗೂ ಯಾವುದೇ ಸಂಶಯವಿಲ್ಲ. ಹಾಗಾಗಿ ಈಗ ಪೋಲೀಸರ ವಿಚಾರಣೆ ಮುಗಿಯುವವರೆಗೆ ಎಲ್ಲರೂ ತಾಳ್ಮೆಯಿಂದ ಸಹಕರಿಸಬೇಕಾಗಿದೆ. ಈ ಸಂದರ್ಭದಲ್ಲಿ ವದಂತಿಗಳನ್ನು ಹರಡಬಾರದು. ಮಾಧ್ಯಮಗಳು ಇನ್ನಷ್ಟು ಸಂಯಮದಿಂದ ವರದಿಗಾರಿಕೆ ಮಾಡಬೇಕು. ಇಂತಹ ಆಘಾತಕಾರಿ ಘಟನೆಯನ್ನು ತಮ್ಮ ಟಿ ಆರ್ ಪಿ ಹೆಚ್ಚಿಸುವ ದಾಳವಾಗಿ ಯಾವುದೇ ಮಾಧ್ಯಮ ಬಳಸಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.