ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬ ಫಲಾನುಭವಿಗಳು ಪಡೆಯುವಂತೆ ನೋಡಿಕೊಳ್ಳಿ : ಅಶೋಕ್ ಕೊಡವೂರು

Spread the love

ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬ ಫಲಾನುಭವಿಗಳು ಪಡೆಯುವಂತೆ ನೋಡಿಕೊಳ್ಳಿ : ಅಶೋಕ್ ಕೊಡವೂರು

ಉಡುಪಿ: ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯ ಪ್ರತಿಯೊಬ್ಬ ಅರ್ಹರಿಗೂ ಇದರ ಲಾಭ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಬಹುತೇಕ ಅರ್ಹ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಯೋಜನೆಗೆ ಅರ್ಜಿ ಸಲ್ಲಿಸಿದ ಕೆಲವೇ ಜನರಿಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಲಾಭ ಪಡೆಯಲು ಸಮಸ್ಯೆಗಳು ಉಂಟಾಗಿವೆ. ಇವುಗಳನ್ನು ಆದ್ಯತೆಯ ಮೇಲೆ ಅರ್ಹರಿದ್ದಲ್ಲಿ ಫಲಾನುಭವಿಗಳನ್ನಾಗಿಸಬೇಕು. ಪ್ರತಿಯೊಂದು ಇಲಾಖೆಗಳಲ್ಲಿಯೂ ಯೋಜನೆಯ ಸಮಸ್ಯೆಗಳು ಬಗೆಹರಿಸಲು ಅಧಿಕಾರಿಗಳನ್ನು ನೇಮಕಮಾಡುವುದು ಸೂಕ್ತ ಎಂದರು.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾದ ಕುಟುಂಬದ ಯಜಮಾನಿ ಮರಣ ಹೊಂದಿದ್ದಲ್ಲಿ ಯಜಮಾನಿ ಬದಲಾವಣೆಗೆ, ಹೊಸ ಮನೆ ನಿರ್ಮಾಣವಾದಾಗ ಹೊಸ ಅರ್ಜಿಯ ಸೇರ್ಪಡೆಗೆ, ರೇಷನ್ ಕಾರ್ಡ್ ಇಲ್ಲದವರಿಗೆ ಹೊಸದಾಗಿ ರೇಷನ್ ಕಾರ್ಡ್ ಪಡೆದು ಗೃಹಲಕ್ಷ್ಮೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶವಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದರೊಂದಿಗೆ ಅರ್ಹರಿಗೆ ಯೋಜನೆಯ ಸೌಲಭ್ಯ ದೊರಕುವಂತೆ ಮಾಡಲಾಗುವುದು ಎಂದರು.

ಗೃಹಲಕ್ಷ್ಮೀ ಯೋಜನೆಯ ಹಣವು ಪ್ರಾರಂಭದ ಮೂರು, ನಾಲ್ಕು ಕಂತುಗಳು ಪಾವತಿ ನಂತರ ಬಾಕಿ ಕಂತುಗಳ ಹಣ ಪಾವತಿಯಾಗುತ್ತಿಲ್ಲ ಎಂಬ ದೂರುಗಳನ್ನು ತಳಮಟ್ಟದ ಕೆಲವು ಫಲಾನುಭವಿಗಳು ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯ ಮುಂದಿಡುತ್ತಿದ್ದಾರೆ ಯಾವ ಕಾರಣದಿಂದ ಹಣ ಜಮೆಯಾಗುತ್ತಿಲ್ಲ ಎಂಬ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವುದರೊಂದಿಗೆ ಯೋಜನೆಗಳು ತಲುಪಲು ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸುವುದರೊಂದಿಗೆ ಯೋಜನೆಯು ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾದವರಲ್ಲಿ ಐ.ಟಿ ಮತ್ತು ಜಿ.ಎಸ್.ಟಿ ಪಾವತಿದಾರರು ಎಂಬ ಕಾರಣಕ್ಕಾಗಿ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಐ.ಟಿ, ಜಿ.ಎಸ್.ಟಿ, ಇ-ಕೆವೈಸಿ ಮ್ಯಾಪಿಂಗ್ ಸೇರಿದಂತೆ ಒಟ್ಟು 7151 ಫಲಾನುಭಿವಿಗಳ ಅರ್ಜಿಗಳು ಬಾಕಿ ಇವೆ. ಈ ಬಗ್ಗೆ ಪರಿಶೀಲಿಸಿ ಅರ್ಹರಿದ್ದಲ್ಲಿ ಅವರಿಗೂ ಗ್ಯಾರಂಟಿ ಯೋಜನೆ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಗ್ರಾಹಕ ಒಂದು ಆರ್ಥಿಕ ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್ ಯೂನಿಟ್ಗೆ ಶೇ. 10 ಯೂನಿಟ್ ಸೇರಿಸಿ, ಗರಿಷ್ಠ 200 ಯೂನಿಟ್ ವರೆಗೆ ನಿಗಧಿತ ಉಚಿತ ಯೂನಿಟ್ಗಳ ವಿದ್ಯುತ್ ಬಳಕೆಗೆ ಅವಕಾಶವಿದೆ. ಕೆಲವು ಗ್ರಾಹಕರು ಬೇಸಿಗೆ ಕಾಲದ ಹಿನ್ನೆಲೆ, ನಿಗಧಿಪಡಿಸಿದ ಯೂನಿಟ್ಗಿಂತ ಹೆಚ್ಚು ವಿದ್ಯತ್ ಬಿಲ್ಲ್ ಬಂದಿದ್ದು, ಪಾವತಿಗೆ ಸ್ವಲ್ಪ ವಿಳಂಬವಾದ ಹಿನ್ನೆಲೆ, ಕರೆಂಟ್ ಸಂಪರ್ಕವನ್ನು ಫ್ಯೂಸ್ ತೆಗೆಯುವ ಮೂಲಕ ಕಡಿತಗೊಳಿಸುತ್ತಿದ್ದಾರೆ. ಇದರಿಂದಾಗಿ ಗೃಹಜ್ಯೋತಿ ಯೋಜನೆಯಿಂದ ರದ್ದುಪಡಿಸಿದ್ದಾರೆ ಎಂದು ತಿಳಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಹೆಚ್ಚುವರಿ ಬಳಕೆಯ ಹಣ ತುಂಬಲು ಸಮಯಾವಕಾಶ ಮಾಡಿಕೊಡಬೇಕು ಎಂದು ಮೆಸ್ಕಾಂ ಇಲಾಖೆಯ ಅಭಿಯಂತರರಿಗೆ ತಿಳಿಸಿದರು.

ಸರಕಾರ ಮಂಗಳೂರು ವಿಭಾಗಕ್ಕೆ ನೂರು ಹೊಸದಾಗಿ ಬಸ್ಗಳನ್ನು ಶೀಘ್ರದಲ್ಲಿಯೇ ನೀಡಲಿದ್ದು, ಅವುಗಳಲ್ಲಿ 40 ಬಸ್ಗಳು ಜಿಲ್ಲೆಗೆ ಆಗಮಿಸಲಿದೆ. ಅಗತ್ಯವಿರುವ ಕಡೆ ಇವುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದ ಅವರು, ಉಡುಪಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಆಧುನಿಕ ಉಪಕರಣಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಎಸ್ಕಲೇಟರ್ ನಿರ್ವಹಣೆ ಕಳಪೆಯಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಹಾಗೂ ಶೌಚಾಲಯದ ಶುಚಿತ್ವವನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮ ವಹಿಸಬೇಕು ಎಂದರು.

ಯುವನಿಧಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 3661 ಅಭ್ಯರ್ಥಿಗಳು ನೋಂದಾಣಿಯಾಗಿದ್ದು, 2741 ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ಹಣ ಪಾವತಿಸಲಾಗಿದೆ ಎಂದ ಅವರು, ಹೆಚ್ಚು ಹೆಚ್ಚು ನೋಂದಣಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸಿ, ಫಲಾನುಭವಿಗಳನ್ನು ಯೋಜನೆಯ ಒಳಗೆ ಬರುವಂತೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜನಸಾಮಾನ್ಯರಿಗೆ ಪಂಚ ಗ್ಯಾರಂಟಿ ಯೋಜನೆಗಳ ಕುರಿತಂತೆ ಯಾವುದೇ ಸಮಸ್ಯೆಗಳನ್ನು ಹೊತ್ತು ತಂದಲ್ಲಿ ಅದನ್ನು ಸಮಾಧಾನಯುತವಾಗಿ ಬಗೆಹರಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.

ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ, ಪಡಿತರವನ್ನು ಪಡೆಯಬೇಕಾಗಿದ್ದು, ಇದಕ್ಕೆ ಪದೇ ಪದೇ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು, ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ಕ್ರಮವಹಿಸಬೇಕು. ಜಿಲ್ಲೆಯ 1406 ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡಿಸಲು ಬಾಕಿ ಇದ್ದು, ಇವುಗಳನ್ನು ಅತೀ ಶೀಘ್ರವಾಗಿ ಮಾಡಿಸಬೇಕು. ಎಂದ ಅವರು, ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ವಯಸ್ಕರು, ಹಾಸಿಗೆ ಹಿಡಿದ ರೋಗಿಗಳು ಹಾಗೂ ಅಂಗವಿಕಲರುಗಳಿದ್ದಲ್ಲಿ ಅವರುಗಳಿಗೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಪಡೆಯಲು ವಿನಾಯಿತಿ ನೀಡುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದ ಅವರು, ಒಂದು ವಾರದ ಒಳಗಾಗಿ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯ ಫಲಕಗಳನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಕೆಲವು ಗ್ರಾಮಾಂತರ ಭಾಗಗಳಿಗೆ ನಗರ ಸಾರಿಗೆ ಬಸ್ಗಳು ನಿರಂತರ ಸಂಚಾರ ನಡೆಸುತ್ತಿಲ್ಲ. ರವಿವಾರ ಹಾಗೂ ಸಾರ್ವತ್ರಿಕಾ ರಜಾದಿನಗಳಲ್ಲಿ ಬಸ್ಗಳು ಟ್ರಪ್ ಡ್ರಾಪ್ ಮಾಡುತ್ತಿವೆ. ಕೊರೋನಾ ನಂತರದಲ್ಲಿ ಟ್ರಿಪ್ ಡ್ರಾಪ್ ಮಾಡಲಾದ ಬಸ್ಗಳು ಮತ್ತೆ ಕಾರ್ಯಾಚರಣೆ ನಡೆಸುತ್ತಿಲ್ಲ ಎಂಬ ದೂರುಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ವರದಿಯನ್ನು ನೀಡುವಂತೆ ಸಿ.ಇ.ಓ ಪ್ರತೀಕ್ ಬಾಯಲ್ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಹೊಸ ಮನೆ ನಿರ್ಮಾಣವಾದಾಗ 58 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ಬಳಕೆಗೆ ಅವಕಾಶವಿದ್ದು, ಸದರಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುವಂತೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ಗೌರವಧನವನ್ನು ಕಾಲಕಾಲಕ್ಕೆ ಪಾವತಿಸುವ ಕುರಿತು ಸೇರಿದಂತೆ ಮತ್ತಿತರರ ಬಗ್ಗೆ ಸಮಿತಿಯ ಸದಸ್ಯರು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರುಗಳಾದ ಪ್ರಶಾಂತ ಜತ್ತನ್ನ, ಸತೀಶ್, ಸಂತೋಷ್ ಕುಲಾಲ್ ಹಾಗೂ ಗೀತಾ ವಾಗ್ಲೆ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರುಗಳು, ತಾಲೂಕುಗಳ ಅಧ್ಯಕ್ಷರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments