ಪಂಚಾಯಿತಿಗೊಂದು ಶಿಶುಸ್ನೇಹಿ ಅಂಗನವಾಡಿ-ಸಿಇಒ ಪ್ರಿಯಾಂಕ ಮೇರಿ

Spread the love

ಪಂಚಾಯಿತಿಗೊಂದು ಶಿಶುಸ್ನೇಹಿ ಅಂಗನವಾಡಿ-ಸಿಇಒ ಪ್ರಿಯಾಂಕ ಮೇರಿ

ಉಡುಪಿ:  ಜಿಲ್ಲೆಯಲ್ಲಿ ಪಂಚಾಯಿತಿಗೊಂದು ಶಿಶುಸ್ನೇಹಿ ಅಂಗನವಾಡಿ ರಚಿಸಿ ಸಣ್ಣ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪಂಚಾಯಿತಿಗೊಂದು ಅತ್ಯಾಕರ್ಷಕ ಅಂಗನವಾಡಿ ನಿರ್ಮಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.

kep-zp-udupi

ಅವರು ಇಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್‍ನ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಇತ್ತೀಚೆಗೆ ಒಂದು ಪಂಚಾಯಿತಿ ಭೇಟಿ ವೇಳೆ ಸರ್ಕಾರಿ ಅಂಗನವಾಡಿ ಪಕ್ಕದಲ್ಲೇ ಖಾಸಗಿ ಅಂಗನವಾಡಿಯ ಆಕರ್ಷಣೆಗೆ ಒಳಗಾಗಿ ಬಡವರು ಸಹ ತಮ್ಮ ಮಕ್ಕಳನ್ನು ವಾರ್ಷಿಕ ಶುಲ್ಕ ಪಾವತಿಸಿ ಅಲ್ಲಿಗೇ ಸೇರಿಸುತ್ತಿರುವ ¨ಗ್ಗೆ ಸಿಇಒ ಗಮನಿಸಿದ್ದು, ಅಂತಹುದೇ ಉತ್ತಮ ಮಾದರಿಯನ್ನು ಸರ್ಕಾರಿ ಅಂಗನವಾಡಿಗಳು ಅನುಸರಿಸಿ, ಮಕ್ಕಳನ್ನು ಆಕರ್ಷಿಸುವ ಅಂಗನವಾಡಿಗಳ ರಚನೆಯಾಗಬೇಕೆಂದರು.

ಉತ್ತಮ ಶೌಚಾಲಯ, ಸಣ್ಣದೊಂದು ತೋಟ, ಕಾರ್ಟೂನ್, ಪೈಟಿಂಗ್‍ಗಳು, ಉತ್ತಮ ಆಟಿಕೆಗಳನ್ನು ಖರೀದಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಈ ಮೂಲಕ ಹೆತ್ತವರಿಗೆ ತಮ್ಮ ಮಕ್ಕಳೂ ಉತ್ತಮ ಅಂಗನವಾಡಿಗಳಲ್ಲಿ ಕಲಿಯುತ್ತಿರುವ ಬಗ್ಗೆ ಹೆಮ್ಮೆ ಮೂಡಿಸುವಂತಹ ಅಂಗನವಾಡಿಗಳನ್ನು ನಿರ್ಮಿಸಿ. 50,000 ರೂ.ಗಳಲ್ಲಿ ಇಂತಹ ಅಂಗನವಾಡಿಗಳ ರಚನೆ ಸಾಧ್ಯ ಎಂದೂ ಸಿಇಒ ಹೇಳಿದರು.

ಶಿಶುಸ್ನೇಹಿ ಅಂಗನವಾಡಿಗಳು ಮಾದರಿಯಾಗಿ ಮೂಡಿಬರಲಿ ಇದಕ್ಕೆ ಸಂಬಂದಪಟ್ಟಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಎಂದು ಸಿಇಒ ಸೂಚಿಸಿದರು.
ಪಡಿತರ ಕೂಪನ್ ಬಗ್ಗೆ ಸವಿವರ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರು, ಹೊಸ ಕೂಪನ್ ವ್ಯವಸ್ಥೆ ವಿತರಣೆಯ ಹಿಂದಿರುವ ಉದ್ದೇಶ ಹಾಗೂ ಅರ್ಹರಿಗೆ ಅದರಲ್ಲೂ ವಿಶೇಷವಾಗಿ ವಿಕಲಚೇತನರು ಮತ್ತು ವಯಸ್ಸಾದವರಿಗೆ ಅವರ ಮನೆಗೆ ಕೂಪನ್ ತಲುಪಿಸುವ ಬಗ್ಗೆ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಕೂಪನ್ ವ್ಯವಸ್ಥೆಯಿಂದ ಪಡಿತರರಿಗೆ ಆಹಾರ ವಿತರಣೆಯಲ್ಲಿ ತೊಂದರೆಯಾಗುವುದನ್ನು ತಪ್ಪಿಸಲು 10 ತಾತ್ಕಾಲಿಕ ತಾಂತ್ರಿಕ ಪರಿಣತರ ಪಡೆಯನ್ನು ರಚಿಸಲಾಗಿದೆ. ಪಡಿತರ ಕೂಪನ್ ಕಡ್ಡಾಯವಾಗಿದ್ದು, ಈಗಾಗಲೇ 3,940 ಕೂಪನ್ ವಿತರಿಸಲಾಗಿದೆ.

ಕೂಪನ್ ಸಿಸ್ಟಮ್‍ನಲ್ಲಿ ಆಧಾರ ಲಿಂಕ್ ಹೊಂದಿರುವ ಕುಟುಂಬದ ಒಬ್ಬ ಸದಸ್ಯರ ಮಾಹಿತಿ ನೀಡಿ ಕೂಪನ್ ಪಡೆದುಕೊಳ್ಳುವುದರಿಂದ ಪಡಿತರ ಲಭ್ಯವಾಗಲಿದ. ಕೂಪನ್ ನಲ್ಲಿ ದರ ನಿಗದಿ ಹಾಗೂ ಆಹಾರಧಾನ್ಯಗಳ ತೂಕ ನಮೂದಾಗಿರುತ್ತದೆ. ಹಾಗೂ ತಮಗೆ ಹತ್ತಿರ ಇರುವ ಯಾವುದೇ ಪಡಿತರ ಅಂಗಡಿಯಿಂದ ಆಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು.

ವಂಡ್ಸೆ, ಶಂಕರನಾರಾಯಣ ಮುಂತಾದೆಡೆಗಳಲ್ಲಿ ಸೊಸೈಟಿಗಳ ಸಹಕಾರದಿಂದ ಗ್ರಾಹಕರಿರುವಲ್ಲಿ ಆಹಾರ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಬಾಬು ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದರು.

ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಬಗ್ಗೆಯೂ ಇಂದು ಮತ್ತೆ ಪ್ರಸ್ತಾಪಿಸಿದ ಅವರು, ಉತ್ತರ ಸಮರ್ಪಕವಾಗಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಮುಂದಿನ ಸಭೆಗೆ ಸಮಗ್ರ ಮಾಹಿತಿ ನೀಡಲು ಹೇಳಿದರು. ಈ ಸಂದರ್ಭದಲ್ಲಿ ಸಿಇಒ ಅವರು ಮಾತನಾಡಿ, ಇಲಾಖೆ ಕೈಗೊಂಡ ಕ್ರಮಗಳು ಹಾಗೂ ಕಳೆದ ತ್ರೈಮಾಸಿಕ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖಾ ಮೇಲಧಿಕಾರಿ ನೀಡಿದ ಸ್ಪಷ್ಟನೆ ಕುರಿತ ಸಮಗ್ರ ಮಾಹಿತಿಯೊಂದಿಗೆ ಜಿಲ್ಲಾ ಪಂಚಾಯತ್‍ಗೆ ವರದಿ ನೀಡಲು ಸೂಚಿಸಿದರು.

ಶಾಲೆ ಕಡೆ ನಮ್ಮ ನಡೆ ಕಾರ್ಯಕ್ರಮದಡಿ 6-14 ವರ್ಷ, ಹಾಗೂ 15-18 ವರ್ಷದ ಮಕ್ಕಳಿಗೆ ಅವಕಾಶ ಮತ್ತು ಆಸಕ್ತಿ ಇರುವವರಿಗೆ ಹತ್ತನೇ ತರಗತಿ ಪರೀಕ್ಷೆ ಬರೆಯಲು ಮತ್ತು ಈಗಾಗಲೇ ದುಡಿಯುತ್ತಿರುವ 18 ವರ್ಷದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಸಿಇಒ ಹೇಳಿದರು.

ಈಗಾಗಲೇ ಮಣಿಪಾಲ ವಿಶ್ವವಿದ್ಯಾನಿಲಯ, ತೆಂಕನಿಡಿಯೂರು, ಬಾರಕೂರು, ಮಿಲಾಗ್ರಿಸ್ ಕಾಲೇಜಿನ ಎಮ್ ಎಸ್ ಡಬ್ಲ್ಯು ವಿದ್ಯಾರ್ಥಿಗಳ ತಂಡಗಳು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿದ್ದು, ಅಧಿಕಾರಿಗಳು ಈ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಸಿಇಒ ಅವರು ಆದೇಶಿಸಿದರು.

ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ವಿಫಲವಾಗಿದ್ದು, ನೂತನವಾಗಿ ಅಂಬೇಡ್ಕರ್ ವಸತಿಯೋಜನೆಯಡಿ ಮತ್ತೆ ಜಿಲ್ಲೆಯಿಂದ 600 ಫಲಾನುಭವಿಗಳ ಆಯ್ಕೆ ಗುರಿ ನಿಗದಿಯಾಗಿದ್ದು, ಜಿಲ್ಲೆಗೆ ಸಂಬಂದಿಸಿದಂತೆ ಕೆಲವು ನಿಯಮಗಳನ್ನು ಎಂ ಡಿ ಸಡಿಲಿಕೆ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳಿಗೆ ಈ ಸಂಬಂಧ ಸುತ್ತೋಲೆಯನ್ನು ಕಳುಹಿಸಲಾಗಿದ್ದು, ನಿಗದಿ ಪಡಿಸಿದ ಗುರಿ ಸಾಧನೆಯಾಗಬೇಕು. ಇದಲ್ಲದೆ ಹಲವರು ಪ್ರಥಮ ಹಂತ ನಿರ್ಮಿಸಿ ಅನುದಾನ ಪಡೆದುಕೊಂಡು ನಿರ್ಲಕ್ಷ್ಯ ಮಾಡಿದ್ದರೆ ಅಂತಹವರಿಂದ ಹಣ ವಸೂಲಿ ಮಾಡಿ ಯಾವ ಪಂಚಾಯಿತಿಯಲ್ಲಿ ಬೇಡಿಕೆ ಇದ್ದಲ್ಲಿ ಅಂತಹವರಿಗೆ ಮರುಹಂಚಿಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. 15 ವರ್ಷದಿಂದ ಸರ್ಕಾರಿ ಜಮೀನು (ಅರಣ್ಯ ಹೊರತುಪಡಿಸಿ) ನಲ್ಲಿ ವಾಸವಾಗಿದ್ದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಲ್ಲೇ ಮನೆ ಕಟ್ಟಲು, ಹಾಗೂ ಜಂಟಿ ಹೆಸರಿನಲ್ಲಿ ದಾಖಲೆಯಿದ್ದು, ಆ ದಾಖಲೆಯಲ್ಲಿ ಈಗ ಮನೆ ಅಗತ್ಯವಿರುವವರ ಹೆಸರಿದ್ದರೂ ಅವರಿಗೆ ಮನೆಕಟ್ಟಲು ಅವಕಾಶ ನೀಡಿ ಎಂದು ಸಿಇಒ ಹೇಳಿದರು.

ಗ್ರಾಮಸಭೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಗುರಿ ಸಾಧಿಸಿ ಎಂದ ಸಿಇಒ ಅವರು, ಇಂದಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮಸಭೆಗಳ ಚರ್ಚೆಯ ಪ್ರಮುಖ ವಿಷಯಗಳನ್ನು ಚರ್ಚಿಸಿ ಗ್ರಾಮಸಭೆಗೆ ಮಹತ್ವ ನೀಡಲಾಗುತ್ತಿದೆ ಎಂಬುದನ್ನು ಸಾಬೀತು ಪಡಿಸಿದರು.

ಅಲೆವೂರು ಗ್ರಾಮದ ನೈಲಪಾದೆ ಎಂಬಲ್ಲಿ ಸೇತುವೆ ರಚನೆ, ಕೆಮ್ತೂರ್ , ಕೊರಂಗ್ರಪಾಡಿ, ಜಲ್ಲಿಕ್ರಷರ್, ರಸ್ತೆ ಡಾಮರೀಕರಣ ಹಾಗೂ ದಾರಿದೀಪ, ಪ್ರಗತಿ ನಗರ ಕಾರ್ಮಿಕ ಕಾಲೊನಿಯ ಮೂಲಭೂತ ಸೌಕರ್ಯ ಅಭಿವೃದ್ಧಿ ವಿಷಯಗಳು ಗ್ರಾಮಸಭೆಯ ಆದ್ಯತಾ ವಿಷಯಗಳು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಚರ್ಚಿಸಲ್ಪಟ್ಟವು.

ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್ ಅವರು ಮಾತನಾಡಿ, ಬೀಜಾಡಿಯ ಗ್ರಾಮಸಭೆಯಲ್ಲಿ ಹೆತ್ತವರ ವಿರುದ್ದ ಶಾಲಾ ಮುಖ್ಯಸ್ಥರು ದೂರು ನೀಡಿದ ಬಗ್ಗೆ ಸಭೆಯ ಗಮನ ಸೆಳೆದರು. ಈ ಸಂದರ್ಭದಲ್ಲಿ ಉತ್ತರಿಸಿದ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು, ವಿದ್ಯಾಂಗ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿದರು.

ಇದೇ ರೀತಿ ಶಾಲಾ ಮಕ್ಕಳಿಗೆ ಕೆಎಂಎಫ್ ನಿಂದ ಪೂರೈಕೆಯಾದ ಹಾಲಿನ ಪುಡಿಯ ಪೊಟ್ಟಣದಲ್ಲಿ ಉತ್ಪಾದಿಸಿದ ದಿನಾಂಕ ಇರದ ಬಗ್ಗೆ ಅಲೆವೂರಿನ ಶಾಲೆಯವರು ನೀಡಿದ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ಸಭೆಗೆ ನೀಡಿದರು. ಈ ಬಗ್ಗೆಯೂ ಮಾಹಿತಿ ನೀಡಲು ಕೆ ಎಂ ಎಫ್ ಅಧಿಕಾರಿಗೆ ಸಿಇಒ ಸೂಚಿಸಿದರು.

ತಲ್ಲೂರು ಉಪ್ಪಿನ ಕುದ್ರು ರಸ್ತೆ ದುರಸ್ತಿ, ಕಾರ್ಕಳದ ಮಲೆಬೆಟ್ಟು ರಸ್ತೆಗಳ ಅಭಿವೃದ್ಧಿ ಬಗ್ಗೆಯೂ ಸದಸ್ಯರು ಗಮನ ಸೆಳೆದರು. ನಮ್ಮ ಗ್ರಾಮ ನಮ್ಮ ರಸ್ತೆಗಳ ನಿರ್ವಹಣೆ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿ ಎಂದು ಸಿಇಒ ಹೇಳಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್ ಅವರು, ಕೈಗಾರಿಕಾ ಇಲಾಖೆ ವಿಶೇಷ ಗೃಹ ನಿರ್ಮಾಣ ಯೋಜನೆ ಬಗ್ಗೆ ಹಾಗೂ ವಾರಾಹಿ ಅಚ್ಚುಕಟ್ಟು ಯೋಜನೆ ಕಾಮಗಾರಿ ವ್ಯಾಪ್ತಿ ಬಗ್ಗೆ ಸಮಗ್ರ ಮಾಹಿತಿ ಬೇಕೆಂದು ಹೇಳಿದರು.

ಎನ್ ಆರ್ ಇ ಜಿ ಯೋಜನೆಯಡಿ ಜಿಲ್ಲೆಯಲ್ಲಿ 45000 ಗಿಡ ನೆಡುವ ಬಗ್ಗೆ ಸಾಮಾಜಿಕ ಅರಣ್ಯದವರು, ತೋಟಗಾರಿಕಾ ಇಲಾಖೆಯವರು ಮಾಹಿತಿ ನೀಡಿ ಎಂದ ಸಿಇಒ ಅವರು, ಕುಂದಾಪುರ ತಾಲೂಕಿನಲ್ಲಿ ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

ಮಹಿಳಾ ದೌರ್ಜನ್ಯ ಸಮಿತಿ ಎಲ್ಲ ಇಲಾಖೆಯವರು ರಚಿಸುವ ಬಗ್ಗೆ ಹಾಗೂ ಅನುಪಾಲನ ವರದಿ ನೀಡಲು ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಗ್ರೇಸಿ ಗೊನ್ಸಾಲ್ವಿಸ್ ಅವರಿಗೆ ಸಿಇಒ ಸೂಚಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಬಾಬು ಶೆಟ್ಟಿ ಅವರು ವರ್ಗಾವಣಾ ನೀತಿ, ಕೌನ್ಸಿಲಿಂಗ್ ಕಾರಣ ಹೇಳಿ ಶಿಕ್ಷಕರು ಶಾಲೆಯಲ್ಲಿ ಕಳೆದೆರಡು ತಿಂಗಳಿಂದ ಪಾಠ ಮಾಡದ ಸ್ಥಿತಿ ನಿರ್ಮಾಣವಾಗಿದೆ ಎಂದಾಗ, ಸಿಇಒ ಅವರು ಶಿಕ್ಷಕರು ಚಲನವಲನ ವಹಿಯನ್ನು ನಿರ್ವಹಿಸಲು ವಿದ್ಯಾಂಗ ಉಪನಿರ್ದೇಶಕರು ಅಗತ್ಯ ನಿರ್ದೇಶನ ನೀಡಿ; ರಜೆ ಹಾಕದೆ ಶಿಕ್ಷಕರು ಶಾಲೆಯಿಂದ ಇತರೆಡೆ ತೆರಳುವಂತಿಲ್ಲ ಎಂದೂ ಹೇಳಿದರು.

ಸಭೆಯಲ್ಲಿ ಶಶಿಕಾಂತ ಪಡುಬಿದ್ದರೆ, ಅಧ್ಯಕ್ಷರು ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ, ಶೀಲಾ ಕೆ ಶೆಟ್ಟಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.


Spread the love