ಪಡಿಕಾರಿ ವಿಶ್ಣು ಭಟ್ ಮನೆ ಡಕಾಯಿತಿ 10 ಮಂದಿ ಬಂಧನ
ಮಂಗಳೂರು: ಪಡಿಕಾರಿ ವಿಶ್ಣು ಭಟ್ ಮನೆ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಐಬಿ ಪೋಲಿಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೋಲಿಸ್ ವರಿಷ್ಠಾಧಿಕಾರಿ ಬೋರಸೆ ಅವರು ಅಕ್ಟೋಬರ್ 25 ರಂದು ಮಧ್ಯಾಹ್ನ 12 ಮಂದಿ ವ್ಯಕ್ತಿಗಳು ವಿಶ್ಣು ಭಟ್ ಅವರ ಮನೆಗೆ ನುಗ್ಗಿ ವಿಶ್ಣು ಭಟ್ ಅವರ ಪತ್ನಿ ಹಾಗೂ ಕೆಲಸದಾಳುವನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದೋಯ್ದಿದ್ದು ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ 2 ತಂಡಗಳನ್ನು ರಚಿಸಲಾಗಿತ್ತು.
ವಿಶ್ಣು ಭಟ್ ಅವರ ಮನೆಯಲ್ಲಿ ನಿಧಿ ಇದೆ ಎಂಬ ಗಾಳಿ ಸುದ್ದಿಯ ಮೇರೆಗೆ ಅವರ ನೆರೆಮನೆಯ ವ್ಯಕ್ತಿ ಶಬರಿ ಕುಮಾರ್ ನಾಯಕ್ ಅವರು ಈ ಬಗ್ಗೆ ಪ್ರವೀಣ್ ಮತ್ತು ಸುರೇಶ್ ಆಚಾರ್ಯ ಎಂಬವರಲ್ಲಿ ಪ್ರಸ್ತಾಪಿಸಿದ್ದು ಅವರು ಇದನ್ನು ಪಾಂಡು ಪೈ ಎಂಬವರ ಬಳಿ ಹೇಳಿದ್ದರು. ಅಕ್ಟೋಬರ್ 25 ರಂದು ಯಶೋಧರ ಶೆಟ್ಟಿ ಎಂಬ ವ್ಯಕ್ತಿ ಕಳ್ಳತನದ ಸಂಪೂರ್ಣ ಯೋಜನೆ ರೂಪಿಸಿ 12 ಮಂದಿ ವ್ಯಕ್ತಿಗಳು ವಿಶ್ಣು ಭಟ್ ಮನೆಗೆ ನುಗ್ಗಿ ಅವರ ಪತ್ನಿ ಹಾಗೂ ಕೆಲಸದಾಳಿಗೆ ಹೊಡೆದು ಕಟ್ಟಿಹಾಕಿ ಚಿನ್ನ ಹಾಗೂ ಬೆಳ್ಳಿಯ ಸಾಮಾಗ್ರಿಗಳನ್ನು ಕದ್ದೊಯ್ಯಲಾಗಿತ್ತು.
ಪ್ರಕರಣಕ್ಕೆ ಸಂಭಂಧಿಸಿ ಪೋಲಿಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೃಷ್ಣ ಶೆಟ್ಟಿ (35) ಕ್ರಷ್ಣಾಪುರ, ಮಿಲನ್ (24) ಸುರತ್ಕಲ್, ರೂಪೇಶ್ ಕುಮಾರ (26), ಮಿಲ್ಟನ್ ಆಲ್ವಿನ್ ಪಿಂಟೊ (24), ಭರತ್ (19), ರಾಕಿ ಅಲಿಯಾಸ್ ರಾಕೇಶ್ (19), ರತನ್ (25), ಸುರೇಶ್ ಆಚಾರ್ಯ (34), ಪ್ರವೀಣ್ ಕುಮಾರ್ (23), ಶಬರಿ ನಾಯಕ್ (24)ಎಂದು ಗುರುತಿಸಲಾಗಿದೆ ಯಶೋಧರ ಶೆಟ್ಟಿ (38) ಮತ್ತು ನಾಗೇಶ್ ಸುರತ್ಕಲ್ ನಾಪತ್ತೆಯಾಗಿದ್ದು ಅವರ ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದೆ.
ಬಂಧಿತರಿಂದ ರೂ 50000 ಮೌಲ್ಯದ ಚಿನ್ನಾಭರಣ, 7 ಲಕ್ಷ ಮೊತ್ತ ಝೈಲೋ ಕಾರು, 3.5 ಲಕ್ಷ ಮೊತ್ತ ಆಲ್ಟೋ ಕಾರು, ನಾಲ್ಕು ಮೊಬೈಲ್ ಸೇರಿದಂತೆ 11 ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.