ಪಡೀಲ್ ದುರ್ಘಟನೆ: ಸರಕಾರದಿಂದ 10 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಕಾಮತ್
ಪಡೀಲ್ ಬಳಿಯ ಕೊಡಕ್ಕಲ್ ನ ಶಿವನಗರದಲ್ಲಿ ಭಾನುವಾರ ರಾತ್ರಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ರಾಮಣ್ಣ ಗೌಡ- ರಜನಿ ದಂಪತಿಯ ಪುತ್ರಿ ವರ್ಷಿಣಿ (9) ಹಾಗೂ ವೇದಾಂತ್ (7) ಮೃತಪಟ್ಟಿದ್ದರು. ಸುದ್ದಿ ತಿಳಿದ ತಕ್ಷಣ ಶಾಸಕ ಡಿ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದ್ದರು ಮತ್ತು ಆರ್ಥಿಕ ಸಹಾಯದ ಭರವಸೆ ನೀಡಿದ್ದರು.
ಅದರಂತೆ ಸೋಮವಾರ ಬೆಳಿಗ್ಗೆ ಅಲ್ಲಿಗೆ ತೆರಳಿದ ಶಾಸಕ ಕಾಮತ್ ಅವರು ರಾಜ್ಯ ಸರಕಾರದ ವತಿಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರದ ಚೆಕ್ ಹಾಗೂ ತಮ್ಮ ವೈಯಕ್ತಿಕ ನೆಲೆಯಿಂದ ತಮ್ಮದೇ ಸೇವಾ ಸಂಸ್ಥೆಯಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಒಂದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.
ಇನ್ನು ರಾಮಣ್ಣ ಗೌಡ-ರಜನಿ ದಂಪತಿಗೆ ಮನೆ ಕಟ್ಟಲು ಸರಕಾರದ ವತಿಯಿಂದ ಜಾಗ ಹಾಗೂ ಮನೆ ಕಟ್ಟಲು ಸಹಾಯ ಧನ ಕೂಡ ಸರಕಾರದ ವತಿಯಿಂದ ನೀಡುವುದಾಗಿ ಶಾಸಕ ಕಾಮತ್ ತಿಳಿಸಿದ್ದಾರೆ.
ಶಾಸಕರೊಂದಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ವಸಂತ ಜೆ ಪೂಜಾರಿ, ಕಂದಾಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.