ಪಡುಬಿದ್ರಿ: ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ
ಉಡುಪಿ: ಮುಂಡೂರು ಗ್ರಾಮದ ಪರೀಕ್ಷಿತ್ ಅವರಿಗೆ ಸೇರಿದ ಬುಲೆಟ್ ಬೈಕನ್ನು ಜ. 21ರಂದು ಪಡುಬಿದ್ರಿಯಲ್ಲಿ ಪಾರ್ಕ್ ಮಾಡಿದ್ದಲ್ಲಿಂದ ಕಳವು ಮಾಡಿ ಒಯ್ದಿದ್ದ ಸೂಳೆಬೈಲು ಶಿವಮೊಗ್ಗದ ಮೊಹಮ್ಮದ್ ರೂಹಾನ್ ಮತ್ತು ಶಿವಮೊಗ್ಗದ ತಾಜುದ್ದೀನ್ ಯಾನೆ ತಾಜು ಎಂಬಿಬ್ಬರು ಅಂತರ್ ಜಿಲ್ಲಾ ಕುಖ್ಯಾತ ಬೈಕ್ ಕಳ್ಳರನ್ನು ಪಡುಬಿದ್ರಿ ಪೊಲೀಸರು ಶಿವಮೊಗ್ಗದಿಂದ ಬಂಧಿಸಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ನಿವಾಸಿ ಮಹಮ್ಮದ್ ರುಹಾನ್(28), ಶಿವಮೊಗ್ಗ ಜಿಲ್ಲೆ ಅಶೋಕನಗರ ನಿವಾಸಿ ತಾಜುದ್ದೀನ್ ಪಿ.ಕೆ @ ತಾಜು(28), ಎಂದು ಗುರುತಿಸಲಾಗಿದೆ
4 ಲ.ರೂ. ಮೌಲ್ಯದ ಸೊತ್ತು ವಶ ಕಳವುಗೈದಿದ್ದ ಬುಲೆಟ್ ಹಾಗೂ ಈ ಕೃತ್ಯಕ್ಕೆ ಬಳಸಿದ್ದ ಮಾರುತಿ ರಿಡ್ಜ್ ಕಾರು ಸಹಿತ ಸುಮಾರು 4 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ತಾಜುದ್ದೀನ್ ಮೇಲೆ ಶಿವಮೊಗ್ಗ ಜಿಲ್ಲೆಯ ಕೋಟೆ, ವಿನೋಬನಗರ, ತುಂಗಾ ನಗರ, ದೊಡ್ಡಪೇಟೆ ಠಾಣೆಗಳಲ್ಲಿ ಕಳವು, ಆಗುಂಬೆ ಪೊಲೀಸ್ ಠಾಣೆಯಲ್ಲಿ ದರೋಡೆ, ವಿದ್ಯಾರ್ಥಿಯ ಅಪಹರಣ, ವಾಹನ ಕಳವು, ಸಾಗರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದರೋಡೆ ಮತ್ತು ವಾಹನ ಕಳ್ಳತನ, ಹಾಸನ ಜಿಲ್ಲೆಯಲ್ಲಿ ದರೋಡೆ ಮತ್ತು ಮನೆ ಕಳವು ಪ್ರಕರಣ, ಧಾರವಾಡ ನಗರ ಠಾಣೆಯಲ್ಲಿ ವಾಹನ ಕಳವು ಮತ್ತು ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಮೇಲಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಕೂಡ ಜಾರಿಯಾಗಿರುವುದಾಗಿ ಪೊಲೀಸ್ ಮಾಹಿತಿಗಳು ತಿಳಿಸಿವೆ.