ಪತ್ನಿಯನ್ನು ಕತ್ತಿಯಿಂದ‌ ಕಡಿದು ಕೊಲೆಗೆ ಯತ್ನ: ಸಿನಿಮೀಯ ರೀತಿಯಲ್ಲಿ ಆರೋಪಿ‌ ಪತಿಯನ್ನು ಸೆರೆ ಹಿಡಿದ ಪೊಲೀಸರು!

Spread the love

ಪತ್ನಿಯನ್ನು ಕತ್ತಿಯಿಂದ‌ ಕಡಿದು ಕೊಲೆಗೆ ಯತ್ನ: ಸಿನಿಮೀಯ ರೀತಿಯಲ್ಲಿ ಆರೋಪಿ‌ ಪತಿಯನ್ನು ಸೆರೆ ಹಿಡಿದ ಪೊಲೀಸರು!

ಕುಂದಾಪುರ: ಪತ್ನಿಯನ್ನು ಕತ್ತಿಯಿಂದ ಕಡಿದು, ಪತಿಯು ಕೊಲೆಗೆ ಯತ್ನಿಸಿದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಸ್ರೂರಲ್ಲಿ ಶನಿವಾರ ರಾತ್ರಿ ಸಂಭವಿಸಿದೆ‌.

ಪತಿ, ಆರೋಪಿ ಲಕ್ಷ್ಮಣ (38) ನನ್ನು ಪೊಲೀಸರು ಬಂಧಿಸಿದ್ದಾರೆ. ಗಂಭೀರ ಗಾಯಗೊಂಡು ಅಸ್ವಸ್ಥರಾಗಿರುವ ಪತ್ನಿ ಅನಿತಾ (32) ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯವೆಸಗಿ ಮನೆಗೆ ಒಳಗಿಂದ ಬಾಗಿಲು ಹಾಕಿ, ಗಂಭೀರ ಗಾಯಗೊಂಡು ಅಸ್ವಸ್ಥಗೊಂಡಿದ್ದ ಪತ್ನಿಯನ್ನು ಹೊರಗೆ ಹೋಗದಂತೆ, ಹೊರಗಿನವರು ಯಾರು ಅವರ ರಕ್ಷಣೆಗೆ ಬಾರದಂತೆ ಸುಮಾರು ಒಂದು ಗಂಟೆಗೆ ಹೆಚ್ಚು ಸಮಯ ಕತ್ತಿ ಹಿಡಿದು ಆರೋಪಿ ಲಕ್ಷ್ಮಣ ಹೆದರಿಸಿದ್ದಾನೆ. ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪತ್ನಿಯನ್ನು ಆರೋಪಿಯ ದಿಕ್ಕು ತಪ್ಪಿಸಿ ಹೇಗೋ ಪ್ರಯಾಸಪಟ್ಟು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ‌ದಾಖಲಿಸಿದ್ದಾರೆ‌.

ಬಳಿಕ ಕೊಲೆಗೆ ಯತ್ನಿಸಿದ ಆರೋಪಿಯನ್ನು ಹಿಡಿಯಲು ಪೊಲೀಸರು ಹರಸಾಹಸ ಪಡುವಂತಾಯಿತು. ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿರುವುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗದೇ ಇರುವುದರಿಂದ ಆರಂಭದಲ್ಲಿ ಪೊಲೀಸರು ಆತನಿದ್ದ ರೂಮಿನ‌ ಕಿಟಕಿ ಮೂಲಕ ಖಾರದ ಪುಡಿ ಎರಚಿದ್ದಾರೆ‌. ಅದರಿಂದ ಆತ ತಪ್ಪಿಸಿಕೊಂಡ ಬಳಿಕ ಏರ್ ಗನ್ ಮೂಲಕ ಗ್ಯಾಸ್ ಸಿಂಪಡಿಸಿದ್ದು, ಅದರಿಂದಲೂ ತಪ್ಪಿಸಿಕೊಂಡಿದ್ದಾನೆ. ಕೊನೆಗೆ ಎದುರಿನ ಬಾಗಿಲು ಒಡೆಯಲು ಪ್ರಯತ್ನಿಸಿದಂತೆ ಮಾಡಿ, ಮತ್ತೊಂದು ತಂಡ ತುಂಡರಿಸಿದ ಕಿಟಕಿ ಮೂಲಕ ಒಳಗೆ ನುಗ್ಗಿ, ಹಿಂದಿನಿಂದ ಆತನನ್ನು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದಂಪತಿ ಸಾಗರ ಮೂಲದವರಾಗಿದ್ದು, ಬಸ್ರೂರಿನ ವೃದ್ಧಾಶ್ರಮವೊಂದರ ತೋಟದಲ್ಲಿ ಕೆಲಸಕ್ಕೆಂದು ಬಂದಿದ್ದು, ಅಲ್ಲಿನ ಕ್ವಾಟ್ರಸ್ ನಲ್ಲಿದ್ದ ಒಂದು ರೂಮಿನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋಗಿ, ಪತಿ ಲಕ್ಷ್ಮಣ ಕತ್ತಿಯಿಂದ ಪತ್ನಿಯ ಮೇಲೆ‌ ಕಡಿದಿದ್ದಾನೆ.ಗಲಾಟೆ, ಕೂಗಾಟದಿಂದ ಪಕ್ಕದ ರೂಮಿನಲ್ಲಿದ್ದವರು ಜಮಾಯಿಸಿದ್ದು, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಊರವರು ಸಹ ಭಾರೀ ಸಂಖ್ಯೆಯಲ್ಲಿ ಸೇರಿದ್ದರು.

ಕುಂದಾಪುರ (ಕಂಡ್ಲೂರು) ಗ್ರಾಮಾಂತರ ಠಾಣಾ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸುದ್ದಿ ತಿಳಿದ ತಕ್ಷಣ ಆಗಮಿಸಿ, ಸ್ಥಳೀಯರ ಸಹಾಯದೊಂದಿಗೆ ಆ ಗಾಯಗೊಂಡ ಮಹಿಳೆಯ ರಕ್ಷಣಾ ಕಾರ್ಯಾದಲ್ಲಿ ಭಾಗಿಯಾದರು.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಜಯರಾಮ ಗೌಡ, ಕಂಡ್ಲೂರು ಎಸ್ ಐ ಭೀಮಾಶಂಕರ ಭೇಟಿ ನೀಡಿ, ನಿಗಾ ವಹಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದಷ್ಟೇ ಹೊರಗೆ ಬರಬೇಕಿದೆ.


Spread the love