ಪದವಿ ಕಲಿಕೆಗಾಗಿ ಸಾಲ ರೂಪದಲ್ಲಿ ವಿದ್ಯಾರ್ಥಿ ವೇತನ
ಉಡುಪಿ : ರಾಜೀವಗಾಂಧಿ ಸಾಲರೂಪದ ವಿದ್ಯಾರ್ಥಿ ವೇತನ ಉಡುಪಿ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅವರ ವಾರ್ಷಿಕ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಸಾಲರೂಪದ ವಿದ್ಯಾರ್ಥಿ ವೇತನವನ್ನು ಸೂಚಿತ ಬ್ಯಾಂಕುಗಳಿಂದ ಪಡೆಯಬಹುದಾಗಿದೆ.
ಈ ಸಂಬಂಧ ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳ ಅಥವಾ ಪೋಷಕರು ತಾವು ಪ್ರವೇಶ ಪಡೆದ ಕಾಲೇಜಿನ ಪ್ರಾಂಶುಪಾಲರನ್ನು ಅಥವಾ ಸಂಯೋಜಕರನ್ನು ಭೇಟಿಮಾಡಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಸಾಲ ಪಡೆಯಲು ಬಯಸುವ ವಿದ್ಯಾರ್ಥಿಗಳು ಬ್ಯಾಂಕ್ನವರು ನೀಡುವ ಅರ್ಜಿಗಳನ್ನು ಭರ್ತಿಮಾಡಿಸಿ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ಗಳಿಗೆ ಸಲ್ಲಿಸುವುದು.
ರಾಜೀವಗಾಂಧಿ ಸಾಲರೂಪದ ವಿದ್ಯಾರ್ಥಿ ವೇತನ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದು ಯಾವುದೇ ವಿದ್ಯಾರ್ಥಿಯು ಬಡತನ ಕಾರಣದಿಂದ ಉನ್ನತ ಶಿಕ್ಷಣದಿಂದ ವಂಚಿತರಾಗ ಬಾರದೆಂಬುದೇ ಸದರಿ ಯೋಜನೆಯ ಉದ್ದೇಶವಾಗಿದೆ.
ಈ ದಿಸೆಯಲ್ಲಿ ವಿಶೇಷವಾಗಿ ಉಡುಪಿ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಯೋಜಕರು ಜವಾಬ್ದಾರಿ ವಹಿಸಿ ಯೋಜನೆಯನ್ನು ಯಶಸ್ವಿಗೊಳಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜುಗಳಿಗೆ ಲೀಡ್ ಕಾಲೇಜ್ ಆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಮನವಿಯನ್ನು ಮಾಡಿರುತ್ತಾರೆ.