ಪರೇಶ್ ಮೇಸ್ತಾ ಕೊಲೆ ಆರೋಪಿಗಳಿಗೆ ಸಿದ್ದರಾಮಯ್ಯ ಸರಕಾರ ರಕ್ಷಣೆ ನೀಡುತ್ತಿದೆ – ಮಟ್ಟಾರ್ ರತ್ನಾಕರ್ ಹೆಗ್ಡೆ
ಉಡುಪಿ: ಹೊನ್ನಾವರದಲ್ಲಿ ಕೋಮುಗಲಭೆ ನಡೆಯುವ ಸಂಭವ ಇದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಮೊದಲೇ ಪೋಲೀಸರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಪರೇಶ್ ಹತ್ಯೆ ನಡೆದಿದೆ. ಆತನ ಹತ್ಯೆಯು ಅತ್ಯಂತ ಅಮಾನುಷ ರೀತಿಯಲ್ಲಿ ನಡೆದಿದ್ದು ಐಸಿಸ್ ಸಂಘಟನೆ ಮಾಡುವ ಹತ್ಯೆಯನ್ನು ಹೋಲುವಂತಿದೆ. ಪೋಲೀಸರು ಅಪರಾಧಿಗಳ ಜೊತೆ ಕೈಜೋಡಿಸಿದ್ದಾರೆ. ಮಚ್ಚು, ಲಾಂಗ್ ಹಿಡಿದ ಮತಾಂಧ ಮುಸ್ಲಿಮರ ಜೊತೆ ಪೋಲೀಸರು ನಿಂತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ.
ಅವರು ಗುರುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾಪತ್ತೆಯಾದ ಯುವಕನನ್ನು ಕೊಲೆ ಮಾಡಿ ಕೆರೆಯಲ್ಲಿ ಶವವನ್ನು ಎಸೆಯಲಾಗಿತ್ತು. ಎರಡು ದಿನಗಳ ಮೊದಲೇ ಕೊಲೆ ನಡೆದಿದ್ದರೂ ಮುಖ್ಯಮಂತ್ರಿಗಳ ಕಾರ್ಯಕ್ರಮದ ನಿಮಿತ್ತ ಪ್ರಕರಣವನ್ನು ಮುಚ್ಚಿಟ್ಟು ಶುಕ್ರವಾರ ಬಹಿರಂಗ ಪಡಿಸಲಾದ ಹಿಂದಿರುವ ಉದ್ದೇಶ ಏನು ?ಎಂದು ಪ್ರಶ್ನಿಸಿದರು.
ಬರ್ಬರವಾಗಿ ಹತ್ಯೆ ನಡೆಸಿ ಮುಖದ ಮೇಲೆ ಕಾದ ಎಣ್ಣೆ ಸುರಿದು ವಿರೂಪಗೊಳಿಸಲಾಗಿದೆ. ಕೈ ಮೇಲೆ ಇದ್ದ “ಜೈ ಶ್ರೀರಾಮ್” ಬರಹವನ್ನು ಕೆತ್ತಿ ವಿರೂಪಗೊಳಿಸಿ ಆತನನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಹತ್ಯೆ ನಡೆದಿರುವುದು ಗೊತ್ತಿದ್ದರೂ ಪೋಲೀಸರು ಪ್ರಕರಣವನ್ನು ಬಹಿರಂಗ ಪಡಿಸಲಿಲ್ಲ. ಅದಕ್ಕೆ ಮುನ್ನ ಶನಿ ದೇವಸ್ಥಾನದ ಬಳಿ ಲಾಠಿ, ಮಚ್ಚು ಮುಂತಾದ ಆಯುಧಗಳನ್ನು ಹಿಡಿದು ನಿಂತಿದ್ದ ಜನರ ವಿರುದ್ಧ ಅಲ್ಲೇ ಇದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೋಲೀಸರು ಯಾರೊಬ್ಬರನ್ನೂ ಬಂಧಿಸದೇ ಇರುವುದಕ್ಕೆ ಕಾರಣವೇನು. ಸ್ವತ: ಪೋಲೀಸರೇ ದುಷ್ಕರ್ಮಿಗಳೊಂದಿಗೆ ಕೈ ಜೋಡಿಸಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಪರೇಶ್ ಮೇಸ್ತಾರವರ ಪೋಸ್ಟ್ಮಾರ್ಟಮ್ ವರದಿಯನ್ನು ತಿರುಚುವ ಪ್ರಯತ್ನ ಮಾಡುವುದರ ಮೂಲಕ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು
ಪಿ.ಎಫ್.ಐ. ಸಂಘಟನೆಗೆ ಐ.ಎಸ್.ಐ.ಎಸ್ ನಂಟಿದೆ. ಆದರೆ ಪಿ.ಎಫ್.ಐ ವಿರುದ್ಧ ಕ್ರಮಕೈಗೊಳ್ಳಬೇಕಾದ ಮುಖ್ಯಮಂತ್ರಿಗಳು ಆ ಸಂಘಟನೆಗೆ ಅರಮನೆ ಮೈದಾನದಲ್ಲಿ ಹಾಗೂ ಮಂಗಳೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಸಮಾವೇಶ ನಡೆಸಲು ಅವಕಾಶ ನೀಡಿದ್ದಾರೆ. ಐ.ಎಸ್.ಐ.ಎಸ್ ನೇಮಕಾತಿಗಾಗಿ ಪಿ.ಎಫ್.ಐ ಮಾಡುತ್ತಿದೆ ಎಂಬ ಗುಮಾನಿಯಿದೆ. ಸಮಾವೇಶದಲ್ಲಿ ದೇಶದ ವಿರುದ್ಧ ಹಾಗೂ ಹಿಂದುಗಳ ವಿರುದ್ಧ ಭಾಷಣವಾದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಬದಲಿಗೆ ಅದೇ ಶಕ್ತಿಗಳಿಗೆ ಮುಖ್ಯಮಂತ್ರಿಗಳಿಂದ ಕುಮ್ಮಕ್ಕು ನೀಡುವ ಯತ್ನ ನಡೆಯುತ್ತದೆ. ಇದು ವೋಟ್ಬ್ಯಾಂಕ್ ರಾಜಕಾರಣವಲ್ಲದೇ ಬೇರೇನೂ ಅಲ್ಲ. ಈಗಾಗಲೇ ಪಿಎಫ್ಐ ಸಂಘಟನೆ ರಾಜ್ಯದಲ್ಲಿ ಇಬ್ಬರನ್ನು ಹತ್ಯೆ ಮಾಡಿರುವುದು ಸಾಬೀತಾಗಿದೆ. (ಶರತ್ ಮಡಿವಾಳ, ರುದ್ರೇಶ್) ಮತ್ತು ಪಿಎಫ್ಐ ಪ್ರಮುಖರು ಜೈಲಲ್ಲಿದ್ದಾರೆ.
ಷಡ್ಯಂತರ ನಡೆಸಿ ಹತ್ಯೆ ನಡೆದಿದ್ದರೂ ಮುಖ್ಯಮಂತ್ರಿ ಗೂಢಚಾರ ಇಲಾಖೆಯಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸದೇ ನಿರ್ಲಕ್ಷಿಸಿದ್ದಾರೆ. ಹಿಂದುಗಳ ಹತ್ಯೆಯಾದರೆ ಮುಖ್ಯಮಂತ್ರಿ ಮಾತನಾಡುವುದೇ ಇಲ್ಲ. ಮುಖ್ಯಮಂತ್ರಿ ತಾನೂ ಹಿಂದು ಎನ್ನುತ್ತಾರೆ. ಆದರೆ ಹಿಂದುಗಳ ದೌರ್ಜನ್ಯ ನಡೆದಾಗ ಬಾಯಿ ಬಿಡುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳೇ ಬಾಯಿಬಿಚ್ಚಿ ಮಾತನಾಡಿ ಎನ್ನುವುದು ನಮ್ಮ ಆಗ್ರಹವಾಗಿದೆ. ಹೊನ್ನಾವರ ಪ್ರಕರಣವೂ ಸೇರಿದಂತೆ ಎಲ್ಲಾ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಾವಿರಾರು ಮಂದಿ ಜೈಲುಗಳಲ್ಲಿದ್ದರೂ ಅವರ ಬಿಡುಗಡೆ ಮಾಡದೇ ಕೆಎಫ್ಡಿ ಮತ್ತು ಪಿಎಫ್ಐ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಕೈಬಿಟ್ಟು ಅವರನ್ನು ಬಿಡುಗಡೆ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದಾಗಿ ಅಪರಾಧಿಗಳು ಹೊರ ಬಂದು ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆದ್ಯತೆ ಕೊಟ್ಟಿತ್ತೇ ವಿನ: ಗಲಭೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿಲ್ಲ. ಬಂಟ್ವಾಳದ ಶರತ್ ಮಡಿವಾಳ ಸತ್ತಾಗ ಮುಖ್ಯಮಂತ್ರಿಗಳು ಮಂಗಳೂರು ಪ್ರವಾಸದಲ್ಲಿದ್ದಾರೆ ಅನ್ನುವ ಕಾರಣಕ್ಕೆ ಸತ್ತಿರುವುದನ್ನು ಮುಚ್ಚಿಟ್ಟು ಮುಖ್ಯಮಂತ್ರಿಗಳು ನಿರ್ಗಮಿಸಿದ ಮೇಲೆ ಸಾವನ್ನೂ ಘೋಷಣೆ ಮಾಡಿದ್ದರು. ಈಗ ಡಿ. 6 ರಂದೆ ಪರೇಶ್ ಮೇಸ್ತಾ ಸತ್ತಿದ್ದರೂ ಸಹ ಡಿ. 7 ರಂದು ಮುಖ್ಯಮಂತ್ರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಅವನ ಶವವನ್ನು ಮುಚ್ಚಿಟ್ಟು ಡಿ.8 ರಂದು ಘೋಷಣೆ ಮಾಡಿದರು. ಸಾವಿನಲ್ಲೂ ರಾಜಕೀಯ ಮಾಡುವ ಸಿದ್ಧರಾಮಯ್ಯನವರ ಸರಕಾರದ ಮನಸ್ಥಿತಿ ಭಯಾನಕವಾಗಿದೆ ಎಂದರು.
ರೈ ಅವರದ್ದು ಬೂಟಾಟಿಕೆಯ ಸಾಮರಸ್ಯ ನಡಿಗೆ : ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡಯುತ್ತಿದ್ದರೂ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಸಾಮರಸ್ಯ ನಡಿಗೆ ಹಾಸ್ಯಾಸ್ಪದ ಅವರು ಕೈಗೊಂಡಿರುವ ನಡಿಗೆ ಸಾಮರಸ್ಯದ್ದಲ್ಲ ಅದು ಹಿಂದೂಗಳ ಸಾವಿನ ಮೇಲೆ ಮಾಡುತ್ತಿರುವ ನಡಿಗೆ. ಕನಿಷ್ಟ ಅವರ ಕ್ಷೇತ್ರದಲ್ಲಿ ಇತ್ತೀಚೆಗೆ ಹತ್ಯೆಯಾದ ಶರತ್ ಮಡಿವಾಳರಿಗೆ ಆಗಲಿ, ಮೊನ್ನೆ ಹತ್ಯೆಯಾದ ಪರೇಶ್ ಮೇಸ್ತನಿಗೆ ಶ್ರದ್ಧಾಂಜಲಿ ಕೊಡದ ಮತ್ತು ಆಗಿರುವ ಹತ್ಯೆಯನ್ನು ಖಂಡಿಸದ ನಡಿಗೆ ಸಾಮರಸ್ಯದ ನಡಿಗೆ ಆಗಲು ಸಾಧ್ಯವೇ ಇಲ್ಲ. ಬೂಟಾಟಿಕೆಯ ನಡಿಗೆ.
ಡಿಸೆಂಬರ್ 18 ಸೋಮವಾರ ಪರೇಶ್ ಮೇಸ್ತಾ ಕೊಲೆಯನ್ನು ಖಂಡಿಸಿ ಉತ್ತರ ಕನ್ನಡದ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಉಡುಪಿ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಲ್ಲದೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಡಿಸೆಂಬರ್ 15 ಶುಕ್ರವಾರ ಸಂಜೆ 4.00 ಗಂಟೆಗೆ ಉಡುಪಿ ಅಜ್ಜರಕಾಡು ಸೈನಿಕ ಹುತಾತ್ಮ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
ಕುಟುಂಬಕ್ಕೆ ಆಶ್ರಯವಾಗಿದ್ದ ಏಕೈಕ 19 ರ ಯುವಕನ ಹತ್ಯೆಯಾಗಿದೆ ಮತ್ತು ಆತನ ಕುಟುಂಬಕ್ಕೆ ಆಶ್ರಯವಿಲ್ಲದಂತಾಗಿದೆ. ಜಿಹಾದಿಗಳ ಜೊತೆ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಪರೇಶ್ ಮೇಸ್ತಾ ಕುಟುಂಬಸ್ಥರು ಬಡ ಮೀನುಗಾರರು ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಪಿ.ಎಫ್.ಐ.ಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಯುವ ಮೋರ್ಚಾದ ಯಶ್ ಪಾಲ್ ಸುವರ್ಣ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.