ಪಾದೂರು ಐ.ಎಸ್. ಪಿ. ಆರ್. ಎಲ್ ಘಟಕದಲ್ಲಿ ಅನಿಲ ಸೋರಿಕೆ ಅನುಭವ; ಆತಂಕ ಬೇಡ ಎಂದ ಜಿಲ್ಲಾಧಿಕಾರಿ
ಉಡುಪಿ: ಉಡುಪಿ ಜಿಲ್ಲೆಯ ಪಾದೂರಿನಲ್ಲಿರುವ ಐ.ಎಸ್. ಪಿ. ಆರ್. ಎಲ್ ಘಟಕದಲ್ಲಿ ಅನಿಲ ಸೋರಿಕೆಯಾದ ಅನುಭವ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಚ್ಚಾ ತೈಲ ಸಂಗ್ರಹಣಾಗಾರ ಘಟಕದಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ಕೂರಾಲು ಪರಿಸರದಲ್ಲಿ ಘಟಕದ ಆಸುಪಾಸು ಪೆಟ್ರೋಲ್ ಘಮಟು ವಾಸನೆ ಬಂದಿದ್ದು ಮಕ್ಕಳಿಗೆ ಉಸಿರಾಟಕ್ಕೆ ಸಮಸ್ಯೆ ಯಾಗುವಂತಹಾ ವಾಸನೆಯ ಅನುಭವ ಆಗಿತ್ತು. ಇದರಿಂದ ಅನಿಲ ಸೋರಿಕೆಯ ಭೀತಿಯಿಂದ ಸ್ಥಳಿಯರಲ್ಲಿ ಆತಂಕ ಉಂಟಾಗಿತ್ತು.
ಈ ಬಗ್ಗೆ ಸ್ಥಳೀಯರು ಕೂಡಲೇ ಮಜೂರು ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ತಹಶಿಲ್ದಾರ್ ಮಹಮ್ಮದ್ ಇಸಾಕ್,ಪೋಲಿಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯ ಹೆಗ್ಡೆ, ಜಿ.ಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ ಭೇಟಿ ನೀಡಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಐ.ಎಸ್.ಪಿ.ಆರ್.ಎಲ್ ಘಟಕದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಗ್ಗೆ ಘಟಕದ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಎಚ್ಚರಿಕೆ ವಹಿಸಿದ್ದು ಸದ್ಯ ಯಾವುದೇ ವಾಸನೆ ಬರುತ್ತಿಲ್ಲ ಎನ್ನಲಾಗಿದೆ ಅಲ್ಲದೆ ಯಾವುದೇ ತಾಂತ್ರಿಕ ದೋಷ ಇಲ್ಲ ಎಂದು ಕಂಪೆನಿ ತಿಳಿಸಿದೆ.
ಮಂಗಳವಾರ ಸ್ಥಳಕ್ಕೆ ಪರಿಸರ ಇಲಾಖೆಯ ತಾಂತ್ರಿಕ ತಂಡ ಬೇಟಿ ನೀಡಲಿದ್ದು ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಭರವಸೆ ನೀಡಿದ್ದಾರೆ.